

ಹಾನಗಲ್ಲ: ರಂಗಗ್ರಾಮ ಶೇಷಗಿರಿಯ ಗ್ರಾಮದ ಚಹಾ ಅಂಗಡಿ ಮಾಲೀಕ, ರಂಗ ಕಲಾವಿದ ‘ಸಿದ್ದಪ್ಪ ರೊಟ್ಟಿ’ ಅವರು 25 ವರ್ಷಗಳ ರಂಗಭೂಮಿ ಸೇವೆಗಾಗಿ 2024-25ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಶೇಷಗಿರಿ ಕಲಾತಂಡಕ್ಕೆ ಎರಡನೇ ಪ್ರಶಸ್ತಿಯಾಗಿದೆ.
ರಂಗಗ್ರಾಮ ಖ್ಯಾತಿಯ ಹಾನಗಲ್ಲ ತಾಲೂಕಿನ ಶೇಷಗಿರಿಯಲ್ಲಿ ಹಲವು ದಶಕಗಳಿಂದ ಸ್ಥಳೀಯ ಕಲಾವಿದರು ರಂಗಭೂಮಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ದೇಶಾದ್ಯಂತ ಹಲವು ನಾಟಕಗಳ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದಾರೆ. ಶೇಷಗಿರಿಯ ಯುವಕರು ಕೃಷಿ ಕಾಯಕದೊಂದಿಗೆ ರಂಗಭೂಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವುದರಿಂದ ಈ ಗ್ರಾಮ ರಂಗ ತರಬೇತಿಯ ಕೇಂದ್ರವಾಗಿದೆ. ಇದಕ್ಕೆಲ್ಲ ಟೊಂಕ ಕಟ್ಟಿ ನಿಂತ ಸಂಘದ ಸಂಚಾಲಕ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ ಇವರಿಗೆ ಸಾಥ್ ನೀಡಿದವರು ಕಲಾವಿದ ಸಿದ್ದಪ್ಪ ರೊಟ್ಟಿ. ಬಡತನದಲ್ಲಿಯೂ ರಂಗಭೂಮಿಯ ಶ್ರೀಮಂತಿಕೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಥೆಯಾದ ಕಾಳ, ಕೊರಳೊಂದು ತಾಳಿ ಎರಡು, ಅಕ್ಷರ ಬಾಳಿಗೊಂದು ಉತ್ತರ, ಮಾತು ಕೊಟ್ಟ ಮುತ್ತೆ್ತ್ರದೆ, ಕಂಪನಿ ಸವಾಲ್, ಬಣ್ಣಕ್ಕೆ ಬೆರಗಾದವರು, ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ, ನ್ಯಾಯದ ಬಾಗಿಲು, ನಮಗೂ ಒಂದು ಕಾಲ, ಜಾತಿ ಮಾಡಬ್ಯಾಡ್ರಿ ಅಧಿಕಾರದೊಳಗ, ಚಂಬು ಪುರಾಣ ಸೇರಿ ನೂರಾರು ನಾಟಕಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಸಿದ್ದಪ್ಪ ರೊಟ್ಟಿ ಗಮನ ಸೆಳೆದಿದ್ದಾರೆ. ಅದರಲ್ಲೂ ಹಾಸ್ಯ ಪಾತ್ರಗಳಲ್ಲಿ ರಂಗ ಪ್ರಿಯರನ್ನು ಆಹ್ಲಾದಗೊಳಿಸಿದ ಸಿದ್ದಪ್ಪ ರೊಟ್ಟಿ ಅವರಿಗೆ ನಿರೀಕ್ಷಿಸದೇ ಬಂದ ಭಾಗ್ಯ ಇದಾಗಿದೆ.
ಧಾರವಾಡ ಆಕಾಶವಾಣಿಯ ರೇಡಿಯೋ ನಾಟಕಗಳಾದ ಉಷಾಹರಣ, ಕತ್ತಲೆಯಿಂದ ಬೆಳಕಿನೆಡೆಗೆ, ಇವ ನಮ್ಮವ, ಚಂದನವಾಹಿನಿಯ ಸಿರಿ ಗಂಧ ಸಿರಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಅತ್ಯಂತ ಹೆಸರುವಾಸಿಯಾದ ಉಷಾಹರಣ, ವಾಲಿವಧೆ, ಚಾವುಂಡರಾಯ, ಭಾರತಾಂಬೆ, ಶೋಕಚಕ್ರ ನಾಟಕಗಳು ರಾಜ್ಯವಲ್ಲದೆ, ಮುಂಬೈ ಹಾಗೂ ದೆಹಲಿಯಲ್ಲಿ ಪ್ರದರ್ಶಗೊಂಡಿವೆ.
ರಂಗ ಸಮ್ಮಾನ: ಸಿಜಿಕೆ ಪ್ರಶಸ್ತಿ, ಹಾವೇರಿಯ ಗೆಳೆಯರ ಬಳಗ, ಬ್ಯಾಡಗಿಯಲ್ಲಿ ನಡೆದ ಜಿಲ್ಲಾ ಉತ್ಸವ, ಅಕ್ಕಿಆಲೂರಿನ ನುಡಿ ಸಂಭ್ರಮ, ಹಾನಗಲ್ಲಿನ ರಂಗ ಸಮ್ಮಾನ ಸೇರಿ ಹತ್ತು ಹಲವು ಗೌರವ ಸಮ್ಮಾನಗಳು ಸಿದ್ದಪ್ಪ ರೊಟ್ಟಿ ಅವರ ಮುಡಿಗೇರಿವೆ.
ರಂಗಪ್ರಿಯ ಹೋಟೆಲ್: ಕೃಷಿ ಕೂಲಿ ಕಾರ್ವಿುಕರಾಗಿ ಜೀವನೋಪಾಯದಲ್ಲಿದ್ದ ಸಿದ್ದಪ್ಪ ರೊಟ್ಟಿ, ಹಳ್ಳಿಯಲ್ಲಿ ಚಹಾ ಅಂಗಡಿ ಆರಂಭಿಸಿದಾಗ ರಂಗ ಪ್ರೀತಿಗಾಗಿ ರಂಗಪ್ರಿಯ ಹೋಟೆಲ್ ಎಂಬ ನಾಮಕರಣ ಮಾಡಿದರು. ಪ್ರತಿವರ್ಷ ಶೇಷಗಿರಿಯ ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಸಾವಿರಾರು ಕಲಾವಿದರು, ಪ್ರೇಕ್ಷಕರಿಗೆ ಇದೇ ಹೋಟೆಲ್ನ ಊಟ ಖಚಿತ. ಅದು ರಂಗ ಪ್ರೀತಿಯ ಶುಚಿ ರುಚಿಯನ್ನೂ ಹೊಂದಿರುತ್ತದೆ. ಇಲ್ಲಿನ ರಂಗ ಮಂದಿರದಲ್ಲಿ ರಾತ್ರಿಯಿಡಿ ರಿಹರ್ಸಲ್ ಮಾಡುವ ಕಲಾವಿದರು ರಾತ್ರಿ ಹೊತ್ತಿನಲ್ಲಿ ಚಹಾ-ಉಪಾಹಾರ ಬೇಕಾದಲ್ಲಿ ಸಿದ್ದಪ್ಪ ರೊಟ್ಟಿ ಅವರ ರಂಗ ಪ್ರಿಯ ಹೋಟೆಲ್ನಲ್ಲಿ ಉಪಾಹಾರ ಸೇವಿಸುುತ್ತಾರೆ. ರಂಗ ಕಲಾವಿದರಿಗಾಗಿ ರಾತ್ರಿಯಿಡಿ ಹೋಟೆಲ್ ತೆರೆದಿರುತ್ತದೆ. ಇದು ರಂಗ ಕಲಾವಿದ ಸಿದ್ದಪ್ಪ ರೊಟ್ಟಿ ಅವರ ಸೇವೆ. ಸದಾ ಹಸನ್ಮುಖದ ಸಿದ್ದಪ್ಪ ರೊಟ್ಟಿ ಅವರಿಗೆ ರಂಗಭೂಮಿಯನ್ನು ಗೌರವಿಸುವ, ಅದಕ್ಕಾಗಿ ಹಂಬಲಿಸುವ, ಇಡೀ ರಂಗ ಮಂದಿರದ ಶ್ರೇಯೋಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮಹದಾಸೆಯಿದೆ. ಹಳ್ಳಿಯ ಹುಡುಗನ ರಂಗದಾಟಕ್ಕೆ ಸಂದ ಗೌರವ ಇದಾಗಿದೆ.