

ಹಾನಗಲ್ಲ: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ತುಂಬಿದ 7 ಜನ ಖಾತೆದಾರರ 50 ಸಾವಿರ ರೂ. ಹಣವನ್ನು ಕಚೇರಿಯ ಶಾಖಾ ಪಾಲಕಿ ನಕಲಿ ಸಹಿ ಮಾಡಿ ಲಪಟಾಯಿಸಿರುವ ಘಟನೆ ಕುರಿತು ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಾಳೆಹಳ್ಳಿಯ ಬೈಚವಳ್ಳಿ ಅಂಚೆ ಕಚೇರಿಯ ಶಾಖಾ ಅಂಚೆ ಪಾಲಕಿ ಅಂಬಿಕಾ ಮಂಜಪ್ಪ ಸಿದ್ದನವರ (22) ಹಣ ಲಪಟಾಯಿಸಿದವಳು.
ಈ ಕುರಿತು ಶಿಗ್ಗಾಂವಿ ವಲಯ ಅಂಚೆ ಕಚೇರಿ ನಿರೀಕ್ಷಕ ವೆಂಕಟೇಶ ಹತ್ತಲಗೇರಿ ದೂರು ನೀಡಿದ್ದಾರೆ. ಆರೋಪಿ ಅಂಬಿಕಾ ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ಹಣ ಹಿಂಪಾವತಿಯ ಮೇಲೆ ಖಾತೆದಾರರ ನಕಲಿ ಸಹಿ ಮಾಡಿ ಹಣ ಪಡೆದಿದ್ದಾರೆ. ಅಲ್ಲದೆ ಸುಕನ್ಯ ಸಮೃದ್ಧಿ ಯೋಜನೆ ಖಾತೆದಾರರಿಂದ ಹಣ ಜಮಾ ಮಾಡಲು ತೆಗೆದುಕೊಂಡು ಅದನ್ನು ಸ್ವಂತಕ್ಕೆ ಬಳಸಿಕೊಂಡು ಖಾತೆದಾರರ ಪುಸ್ತಕದಲ್ಲಿ ಮುದ್ರೆ ಹಾಕಿ ಸಹಿ ಮಾಡಿ ಕೊಟ್ಟಿದ್ದಾಳೆ. ಆದರೆ, ಈ ಕುರಿತು ಕಚೇರಿಯ ಪುಸ್ತಕದಲ್ಲಿ ಯಾವುದೆ ವಿವರ ನಮೂದು ಮಾಡದೆ ಒಟ್ಟು 7 ಜನರಿಂದ 50 ಸಾವಿರ ರೂ. ಪಡೆದುಕೊಂಡು ಸಾರ್ವಜನಿಕರಿಗೆ ಹಾಗೂ ಅಂಚೆ ಕಚೇರಿಗೆ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.