ಹಾನಗಲ್ಲ: ಅಡಕೆ ಬೆಳೆಗೆ ಸುಣ್ಣ ಬಳಿವ ಅನಿವಾರ್ಯತೆ

areca nut crop
Published on

ಹಾನಗಲ್ಲ: ಬೇಸಿಗೆ ಬಿಸಿಲಿನ ತಾಪ ತಡೆಯಲು ಹಾಗೂ ಕೀಟ ಬಾಧೆಯ ನಿಯಂತ್ರಣಕ್ಕಾಗಿ ತಾಲೂಕಿನಾದ್ಯಂತ ತೋಟಗಳಲ್ಲಿ ಅಡಕೆ ಗಿಡಗಳಿಗೆ ಸುಣ್ಣ ಹಚ್ಚುವ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ.

ಮಳೆಗಾಲದಲ್ಲಿ ಮೇಲಿನಿಂದ ಸುರಿದ ನೀರಿನ ದಾರಿಗುಂಟಲೇ ಅಡಕೆ ಬೆಳೆಗೆ ಹಾನಿಯುಂಟು ಮಾಡುವಂಥ ಬಸವನಹುಳು, ಗೆದ್ದಲುಹುಳು ಸೇರಿದಂತೆ ಇನ್ನಿತರ ಭೂಮಿಯಲ್ಲಿರುವ ಕೀಟಗಳು ಗಿಡದ ಮೇಲೇರುವ ಅಪಾಯ ರೈತರನ್ನು ಕಾಡುತ್ತದೆ. ಜತೆಗೆ, ಬೇಸಿಗೆಯಲ್ಲಿ ಹೆಚ್ಚಾಗುವ ಬಿಸಿಲಿನ ಝುಳವನ್ನು ಅಡಕೆ ಗಿಡಗಳು ತಡೆದುಕೊಂಡು ಫಲ ಹಿಡಿಯುವ ನಿಟ್ಟಿನಲ್ಲಿ ರೈತರು ಅಡಕೆಯ ಆರೈಕೆ ನಡೆಸುತ್ತಿದ್ದಾರೆ.

ಮಳೆಗಾಲದ ನೀರಿನಿಂದಾಗಿ ಅಡಕೆ ಗಿಡಗಳಿಗೆ ಫಂಗಸ್ ಅಂಟಿಕೊಳ್ಳುವುದರಿಂದ ಅಣಬೆ ರೋಗ ಕಾಡುತ್ತದೆ. ಈ ನಿಟ್ಟಿನಲ್ಲಿ ಸುಣ್ಣದೊಂದಿಗೆ ಮೈಲುತುತ್ತೆಯನ್ನು ಮಿಶ್ರಣಗೊಳಿಸಿ ಅಡಕೆ ಗಿಡಗಳ ಬೊಡ್ಡೆಗಳಿಗೆ ಲೇಪನ ಮಾಡಲಾಗುತ್ತದೆ. ಮೈಲುತುತ್ತೆ ಕೀಟನಾಶಕದ ರೂಪದಲ್ಲಿ ಕೆಲಸ ಮಾಡುತ್ತದೆ. ಮೈಲುತುತ್ತೆ ಬಳಸುವುದರಿಂದ ಬೆಳೆಗೆ ಹಾನಿಯುಂಟು ಮಾಡುವ ಸೂಕ್ಷ್ಮ ಜೀವಾಣುಗಳು ಅಲ್ಲಿಯೇ ನಶಿಸಿಹೋಗುತ್ತವೆ. ಕೀಟಗಳು ಗಿಡದ ಸಮೀಪ ಬಾರದಂತೆ ಕಾಂಡವು ವಿಷಪೂರಿತವಾಗುತ್ತದೆ. ರೈತರು ಅಡಕೆ ಗಿಡಗಳಿಗೆ ಸುಣ್ಣ ಮತ್ತು ಮೈಲುತುತ್ತೆ ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೇಸಿಗೆ ಅವಧಿಯಲ್ಲಿ ಸಂಜೆ 4ರಿಂದ 6 ಗಂಟೆವರೆಗೆ ಪಶ್ಚಿಮ ದಿಕ್ಕಿನಿಂದ ಸೂರ್ಯನ ಕಿರಣಗಳು ನೇರವಾಗಿ ಅಡಕೆ ಗಿಡಕ್ಕೆ ಬೀಳುವುದರಿಂದ ಬಿಸಿಲಿನ ಪ್ರಖರತೆಗೆ ಹಳದಿ ವರ್ಣಕ್ಕೆ ತಿರುಗಿ ಸುಟ್ಟಂತಾಗುತ್ತವೆ. ಹೀಗಾಗಿ ಸುಣ್ಣ ಲೇಪನ ಮಾಡುವುದರಿಂದ ಈ ಅಪಾಯ ತಪ್ಪಿಸಬಹುದಾಗಿದೆ ಎಂಬುದು ತೋಟಗಾರಿಕೆ ತಜ್ಞರ ಅಭಿಪ್ರಾಯವಾಗಿದೆ.

ಕೆಲವು ರೈತರು ಸೂರ್ಯನ ಪ್ರಖರತೆಯನ್ನು ತಡೆಗಟ್ಟಲು ಸುಣ್ಣ ಹಚ್ಚುವ ಬದಲು ಗಿಡಗಳಿಗೆ ಗರಿಗಳನ್ನು ಕಟ್ಟುವ ಸಂಪ್ರದಾಯವನ್ನೂ ಅಳವಡಿಸಿಕೊಂಡಿದ್ದಾರೆ. ಇದರಿಂದ ಬಿಸಿಲು ತಡೆಗಟ್ಟಬಹುದು, ಆದರೆ ಕೀಟಬಾಧೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ಕೀಟಗಳು ಗಿಡಕ್ಕೆ ಕಟ್ಟಿದ ಗರಿಗಳಲ್ಲಿಯೇ ವಾಸಮಾಡಿ, ಸಂತಾನೋತ್ಪತ್ತಿಗೆ ಸಹಕಾರಿಯಾಗುತ್ತದೆ ಎಂಬ ಅಪಾಯವನ್ನೂ ರೈತರು ಅರಿತುಕೊಳ್ಳಬೇಕಿದೆ. ಸುಣ್ಣದೊಂದಿಗೆ ಬೆಲ್ಲ, ಮೈದಾಹಿಟ್ಟು ಮತ್ತು ಸಿಓಸಿ ಪೌಡರ್ ಮಿಶ್ರಣ ಬಳಕೆ ಮಾಡುವ ಪದ್ಧತಿಯೂ ಇದೆ. ಡಿಸೆಂಬರ್ ಅಂತ್ಯದಲ್ಲಿಯೇ ರೈತರು ಸುಣ್ಣ ಹಚ್ಚುವ ಪ್ರಕ್ರಿಯೆ ಕೈಗೊಳ್ಳುವ ಅಗತ್ಯವಿದ್ದು, ಬಿಸಿಲಿನ ತಾಪಮಾನದಿಂದ ಅಡಕೆ ಗಿಡದ ಬೊಡ್ಡೆಗಳು ಸೀಳುಬಿಡುವುದನ್ನು ತಪ್ಪಿಸಬಹುದಾಗಿದೆ. ಮುಂಗಾರು ಪೂರ್ವದಲ್ಲಿ ಕೊಟ್ಟಿಗೆ ಗೊಬ್ಬರ, ಝಿಂಕ್​ಸಲ್ಪೇಟ್, ಬೋರಾನ್, ಮ್ಯಾಗ್ನೇಶಿಯಂಗಳನ್ನು ಮಿಶ್ರಣಗೊಳಿಸಿ, ಪ್ರತಿ ಎಕರೆಗೆ ನಾಲ್ಕು ಟ್ರ್ಯಾಕ್ಟರ್​ನಷ್ಟು ಕೊಟ್ಟಿಗೆ ಗೊಬ್ಬರ ಅಡಕೆ ಗಿಡಗಳ ಎರಡು ಸಾಲಿನ ಮಧ್ಯೆ ಹರಡಬೇಕಿದೆ. ತೋಟದಲ್ಲಿನ ಬಸಿಗಾಲುವೆಯಿಂದ ತೆಗೆದ ಮಣ್ಣನ್ನು ಹರಡಿದ ಕೊಟ್ಟಿಗೆ ಗೊಬ್ಬರದ ಮೇಲೆ ಹಾಕಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರಿ ಸಲಹೆ ನೀಡಿದ್ದಾರೆ.

ಅಡಕೆ ಗಿಡಗಳಿಗೆ ಪ್ರತಿ ವರ್ಷ ಕಡ್ಡಾಯವಾಗಿ ಸುಣ್ಣ ಲೇಪನಗೊಳಿಸುವುದು ಅವಶ್ಯ. ಅಡಕೆ ಬೆಳೆಯಲ್ಲಿ ಆದಾಯ ಹೆಚ್ಚಿಸಲು ಅಂತರ್​ಬೆಳೆಯಾಗಿ ಕಾಫಿ, ಕಾಳುಮೆಣಸು, ಕೋಕೊ, ದಾಲ್ಚಿನ್ನಿ, ಏಲಕ್ಕಿ, ಚಕ್ಕಿ ಗಿಡಗಳನ್ನು ಬೆಳೆಯಬಹುದು. ಮಧ್ಯಂತರ ಬೆಳೆಗಳಿಂದ ಉದುರುವ ಎಲೆಗಳಿಂದ ಸಾವಯವ ಗೊಬ್ಬರವಾಗಿ ಅನುಕೂಲವಾಗುತ್ತದೆ. ಭೂಮಿಯಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಬಸಿಗಾಲುವೆ ನಿರ್ವಣದಿಂದ ಅಡಕೆಗೆ ತಗಲುವ ಎಲೆಚುಕ್ಕಿ ರೋಗ, ಸೊರಗು ರೋಗ, ಕೊಳೆರೋಗ, ಹಿಡಿಮುಂಡಗಿ ರೋಗಗಳನ್ನು ನಿಯಂತ್ರಿಸಬಹುದಾಗಿದೆ. | ಮಂಜುನಾಥ ಬಣಕಾರ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net