ಹಾನಗಲ್ಲ ಪಟ್ಟಣಕ್ಕಿನ್ನು ಹದ್ದಿನಕಣ್ಣು

C C Camara in hanagal
Published on

ಹಾನಗಲ್ಲ: ಕಸ ವಿಲೇವಾರಿ ಸಮಸ್ಯೆ, ಅಪಘಾತ ಹಾಗೂ ಅಪರಾಧ ಪ್ರಕರಣಗಳ ನಿರ್ವಹಣೆ ನಿಟ್ಟಿನಲ್ಲಿ ಪಟ್ಟಣದ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸ್ಥಳೀಯ ಪುರಸಭೆ ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪಟ್ಟಣದಲ್ಲಿ ಅಪಘಾತಗಳು, ಕಳವು ಹಾಗೂ ಇತರ ಅಪರಾಧಿಕ ಚಟುವಟಿಕೆಗಳು ಹೆಚ್ಚುತ್ತಿವೆ. ಅಪಘಾತ, ಕಳವು ಕುರಿತು ಪ್ರಕರಣ ದಾಖಲಾಗುತ್ತಿವೆ. ಆದರೆ, ಪಟ್ಟಣದ ಯಾವುದೇ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳು ಇಲ್ಲದ್ದರಿಂದ ಹಲವು ಕೃತ್ಯಗಳ ಅಪರಾಧಿಗಳ ಸುಳಿವು ಸಿಗದೇ ಪ್ರಕರಣಗಳು ಧೂಳು ತಿನ್ನುತ್ತಿವೆ.

ಸಾರ್ವಜನಿಕರು ರಾತ್ರೋರಾತ್ರಿ ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಸುರಿದು ಹೋಗುತ್ತಾರೆ. ಅಂತಹವರನ್ನು ಪತ್ತೆ ಹಚ್ಚಲು ಹಾಗೂ ಕಸ ವಿಲೇವಾರಿ ಕುರಿತು ಪರಿಶೀಲಿಸಲು ಪುರಸಭೆಗೆ ಸಮಸ್ಯೆಯಾಗುತ್ತಿತ್ತು. ಆದರೆ, ಈಗ ಸಿಸಿ ಕ್ಯಾಮರಾ ಅಳವಡಿಕೆಯಿಂದ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಕಸ ವಿಲೇವಾರಿ ನಿರ್ವಹಣೆಗೆ ಅನುಕೂಲವಾಗಲಿದೆ.

ಕಳವು ಕೃತ್ಯ ತಡೆಯುವ ನಿಟ್ಟಿನಲ್ಲಿ ವ್ಯಾಪಾರಸ್ಥರು, ನಾಗರಿಕರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಮೂರ್ನಾಲ್ಕು ವರ್ಷಗಳಿಂದಲೂ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಇದೀಗ ಅವರ ಬೇಡಿಕೆ ಈಡೇರುವ ಕಾಲ ಕೂಡಿಬಂದಿದೆ.

ಎಲ್ಲೆಲ್ಲಿ ಅಳವಡಿಕೆ:

ಪಟ್ಟಣದ ಆನೆಕೆರೆಯಿಂದ ಪಾಳಾ ಕ್ರಾಸ್​ವರೆಗಿನ ಜನನಿಬಿಡ ಪ್ರದೇಶಗಳಾದ ತಾಲೂಕು ಕಚೇರಿ, ಬ್ಯಾಂಕ್​ಗಳು, ಎಟಿಎಂಗಳು, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ, ಲೋಕೋಪಯೋಗಿ ಇಲಾಖೆ, ಪುರಸಭೆ, ದೇವಸ್ಥಾನಗಳು, ಪೊಲೀಸ್ ಠಾಣೆ, ಶಾಲಾಕಾಲೇಜುಗಳು, ಮಹಾತ್ಮ ಗಾಂಧಿ ವೃತ್ತ, ಹೋಟೆಲ್​ಗಳು ಸೇರಿದಂತೆ ಒಟ್ಟು 34 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಸ್ಥಳೀಯ ಪುರಸಭೆ 20 ಲಕ್ಷ ರೂಪಾಯಿ ಅನುದಾನದಲ್ಲಿ ಈ ವ್ಯವಸ್ಥೆ ಕೈಗೊಳ್ಳುತ್ತಿದೆ. ಪ್ರಮುಖ ನಾಲ್ಕು ಸ್ಥಳಗಳಲ್ಲಿ 360 ಡಿಗ್ರಿ ಕ್ಯಾಮರಾ ಸೇರಿದಂತೆ ಉಳಿದೆಡೆ ಏಕಮುಖಿ ಕ್ಯಾಮರಾಗಳು ಕಾರ್ಯನಿರ್ವಹಿಸಲಿವೆ. ಈಗಾಗಲೇ ಕಂಬಗಳನ್ನು ಹಾಕಲಾಗಿದ್ದು, ಕ್ಯಾಮರಾ ಅಳವಡಿಕೆ ಆರಂಭಗೊಳ್ಳಲಿದೆ.

ಪುರಸಭೆ, ಠಾಣೆಯಲ್ಲಿ ವೀಕ್ಷಣೆ:

ಎಲ್ಲ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಗಳ ವೀಕ್ಷಣೆಗೆ ಪುರಸಭೆ ಹಾಗೂ ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಯಲ್ಲಿ ಎಲ್​ಇಡಿ ಡಿಸ್​ಪ್ಲೇ ಟಿವಿ ಅಳವಡಿಸಲಾಗುತ್ತಿದೆ. ತಡಸ-ಶಿವಮೊಗ್ಗ ಹೆದ್ದಾರಿ ಹಾನಗಲ್ಲಿನಲ್ಲಿ ಹಾಯ್ದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ಬೈಕ್ ಸವಾರರ ವೇಗ ನಿಯಂತ್ರಣ, ಕಾನೂನು ಉಲ್ಲಂಘನೆಗಳನ್ನು ತಡೆಯಲು ಪೊಲೀಸರು ಮುಂದಾಗಲಿದ್ದಾರೆ. ಸಿಸಿ ಕ್ಯಾಮರಾಗಳನ್ನು 2 ವರ್ಷ ಪುರಸಭೆ ಹಾಗೂ ಪೊಲೀಸ್ ಇಲಾಖೆ ನಿರ್ವಹಿಸಲಿದ್ದು, ನಂತರ ಖಾಸಗಿ ಸಂಸ್ಥೆಗೆ ವಹಿಸಲಾಗುತ್ತದೆ.

ಅಂಗಡಿಗಳಲ್ಲಿ ಕಳವಿನಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ಪೊಲೀಸ್ ಇಲಾಖೆ, ಪುರಸಭೆ, ತಾಲೂಕು ಆಡಳಿತಕ್ಕೆ ಸಿಸಿ ಕ್ಯಾಮರಾ ಅಳವಡಿಸಲು ಮನವಿ ಮಾಡುತ್ತ ಬಂದಿದ್ದೇವೆ. ಇದೀಗ ಸಾರ್ವಜನಿಕರ ಒತ್ತಾಸೆಗೆ ಸಂಬಂಧಿಸಿದ ಇಲಾಖೆಗಳು ಸ್ಪಂದಿಸುತ್ತಿರುವುದು ಸ್ವಾಗತಾರ್ಹ. ಸಿಸಿ ಕ್ಯಾಮರಾಗಳ ನಿರ್ವಹಣೆಯಲ್ಲಿ ಲೋಪವಾಗದಂತೆ ಕಾಳಜಿ ವಹಿಸಬೇಕಿದೆ. | ರವಿಚಂದ್ರ ಪುರೋಹಿತ, ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಕಸ ವಿಲೇವಾರಿ ಹಾಗೂ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಉದ್ದೇಶದಿಂದ ಪುರಸಭೆ ಅನುದಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿದೆ. ಇದರೊಂದಿಗೆ ಪೊಲೀಸ್ ಇಲಾಖೆಯ ತನಿಖಾ ಕಾರ್ಯಗಳಿಗೆ ಸಿಸಿ ಕ್ಯಾಮರಾ ದೃಶ್ಯಾವಳಿ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಶೀಘ್ರದಲ್ಲಿ ಪಟ್ಟಣದಾದ್ಯಂತ ಸಿಸಿ ಕ್ಯಾಮರಾಗಳು ಕಾರ್ಯåರಂಭ ಮಾಡಲಿವೆ. | ನಾಗರಾಜ ಮಿರ್ಜಿ, ಪುರಸಭೆ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net