

ಹಾನಗಲ್ಲ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗಿರುವುದರಿಂದ ಈ ವರ್ಷದ ಮಾವಿನ ಫಸಲಿನ ಬಗೆಗೆ ರೈತರ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ಔಷಧ ಸಿಂಪರಣೆ ಹಾಗೂ ನೀರು ನಿರ್ವಹಣೆ ಭರದಿಂದ ಸಾಗಿವೆ.
ತಾಲೂಕಿನಲ್ಲಿ ಸುಮಾರು 3150 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇತ್ತೀಚೆಗೆ ಮಾವು ಬೆಳೆಯಿಂದ ಲಾಭವಾಗುತ್ತಿಲ್ಲ ಎಂದು ರೈತರು ಗಿಡಗಳನ್ನು ಕಡಿದು, ಅಡಕೆ, ಬಾಳೆಗಳಂಥ ಬೇರೆ ಬೆಳೆಗಳತ್ತ ವಾಲುತ್ತಿದ್ದಾರೆ. ಆದಾಗ್ಯೂ ಮಾವಿನ ಗಿಡಗಳಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಹೂವುಗಳು ಕಂಡುಬರುತ್ತಿದೆ. ಹೂವುಗಳನ್ನು ಕೀಟಬಾಧೆಯಿಂದ ಕಾಪಾಡಿಕೊಳ್ಳಲು ರೈತರು ಎಲ್ಲ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹೂವು ಬಿಟ್ಟಿರುವುದರಲ್ಲಿ ಅರ್ಧದಷ್ಟಾದರೂ ಕಾಯಿ ಕಚ್ಚಿದರೆ ಲಾಭ ಇಮ್ಮಡಿಯಾಗುತ್ತದೆಂಬ ಆಶಾಭಾವನೆ ಹೊಂದಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಇಬ್ಬನಿ ಹೆಚ್ಚಾಗುವುದರಿಂದ ಮಾವಿನ ಹೂವಿಗೆ ಬೂದುರೋಗ, ಜಿಗಿ ಹುಳುವಿನ ಬಾಧೆ, ಕಾಯಿಕೊರಕಗಳ ಬಾಧೆ ಆರಂಭವಾಗುತ್ತದೆ. ರೈತರು ಈಗ ಹೂವು-ಹೀಚುಗಳು ಉದುರದಂತೆ ಕಾಪಾಡಿಕೊಳ್ಳುವ ಧಾವಂತದಲ್ಲಿದ್ದಾರೆ.
ಮಾವಿನ ಹಣ್ಣುಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಉತ್ಕೃಷ್ಟತೆಯ ಖ್ಯಾತಿ ಹಾನಗಲ್ಲಿನ ಮಾವಿನ ಹಣ್ಣಿಗಿದೆ. ತಾಲೂಕಿನ ಭೂಮಿ ಮತ್ತು ಹವಾಗುಣಗಳು ಹಣ್ಣುಗಳ ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ. ಮಾವಿನ ಹಣ್ಣಿನಲ್ಲಿ ತಿರುಳು ಹೆಚ್ಚಾಗಿರುವುದು ಹಾಗೂ ವಿಶೇಷವಾದ ರುಚಿ ಈ ತಾಲೂಕಿನ ಮಾವಿನಹಣ್ಣಿನ ವೈಶಿಷ್ಠ್ಯವಾಗಿದೆ. ತಾಲೂಕಿನಲ್ಲಿ ಆಪೂಸ್, ಬಾದಾಮಿ, ಕೇಸರ್, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಜಗತ್ತಿನ ಬಹಳಷ್ಟು ದೇಶಗಳಿಗೆ ಹಾನಗಲ್ಲ ಮಾವು ರವಾನೆಯಾಗುತ್ತದೆಂಬುದು ಇಲ್ಲಿನ ಮಾವು ಬೆಳೆಗಾರ ರೈತರ ಹೆಮ್ಮೆಯಾಗಿದೆ. ಹಾನಗಲ್ಲಿನಲ್ಲಿ ಮಾವು ಖರೀದಿ ಕೇಂದ್ರವಿರುವುದರಿಂದ ಹಾವೇರಿ ಸೇರಿದಂತೆ ಸುತ್ತಲಿನ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಮಾವು ಇಲ್ಲಿಗೆ ಆಗಮಿಸುತ್ತದೆ.
ಜಿಲ್ಲೆಯಲ್ಲಿ 5127 ಹೆಕ್ಟೇರ ಕ್ಷೇತ್ರದಲ್ಲಿ, ತಾಲೂಕಿನಲ್ಲಿ 3216 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆಯಿದೆ. ಜಿಲ್ಲೆಯಲ್ಲಿ ಒಟ್ಟು 46,390 ಮೆ.ಟನ್ ಮಾವಿನ ಫಸಲು ಉತ್ಪಾದಿಸಲಾಗುತ್ತಿದೆ. ಜಿಲ್ಲೆಯ ಅರ್ಧದಷ್ಟು ಮಾವು (23,896 ಮೆ.ಟನ್) ಕೇವಲ ಹಾನಗಲ್ಲ ತಾಲೂಕಿನಲ್ಲಿಯೇ ಬೆಳೆಯುತ್ತದೆ. ತಾಲೂಕಿನಲ್ಲಿ ಸುಮಾರು 3900 ರೈತರು ಮಾವು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಾವಿನ ಫಸಲನ್ನು ಬೆಳೆಯುತ್ತಿರುವ ಹಾನಗಲ್ಲ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿನ ಮಾವಿನ ಗಿಡಗಳನ್ನು ಕಡಿದು ಹಾಕಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ್ದರಿಂದ ರೈತರು ಹತಾಶರಾಗಿ ಮಾವಿನ ಗಿಡಗಳನ್ನು ಕಡಿದು ಹಾಕುವ ನಿರ್ಧಾರಕ್ಕೆ ಬರುತ್ತಿರುವುದು ವಿಪರ್ಯಾಸ.
ಮೂರು ವರ್ಷಗಳ ಹಿಂದೆ ಘೊಷಣೆಯಾಗಿ ನನೆಗುದಿಗೆ ಬಿದ್ದಿದ್ದ ಇಲ್ಲಿನ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಮರುಜೀವ ಬಂದಿದ್ದು, ಇತ್ತೀಚೆಗೆ ಅಧಿಕಾರಿಗಳು ಭೇಟಿ ನೀಡಿ ಘಟಕ ನಿರ್ವಣಕ್ಕೆ ಒಂದಷ್ಟು ಚಾಲನೆ ನೀಡಿದ್ದಾರೆ. ಮಾವಿನ ಫಸಲು ಸಮರ್ಪಕವಾಗಿದ್ದರೂ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿ ರೈತ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ತಂತ್ರಜ್ಞಾನ ಬಳಕೆಯಿಂದ ಮಾವಿನ ಹಣ್ಣುಗಳನ್ನು ಶೀತಲಾಗಾರದಲ್ಲಿ ಸಂಗ್ರಹಿಸಿ, ದರ ಬಂದಾಗ ಮಾರಾಟ ಮಾಡುವ ಅವಕಾಶ ಸಿಗುವುದರಿಂದ ಮತ್ತು ಹೊರದೇಶಗಳಿಗೆ ಹಣ್ಣುಗಳನ್ನು ರಫ್ತು ಮಾಡುವ ಮೂಲಕ ಒಂದಷ್ಟು ಲಾಭ ದೊರಕುತ್ತದೆಂಬ ಆಶಾಭಾವನೆ ರೈತರಿಂದ ವ್ಯಕ್ತವಾಗಿದೆ.
ಕಳೆದ ವರ್ಷ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆಯಾಗದ್ದರಿಂದ ಮಾವಿನ ಹಣ್ಣುಗಳ ಉತ್ಪಾದನೆಯಲ್ಲಿ ಬಹುದೊಡ್ಡ ಹಿನ್ನಡೆಯಾಗಿತ್ತು. ವಾರ್ಷಿಕ ಉತ್ಪಾದನೆಯ ಅರ್ಧಕ್ಕಿಂತ ಕಡಿಮೆ ಫಸಲು ಬಂದಿತ್ತು. ಆದಾಗ್ಯೂ ಮಾವಿಗೆ ದರ ಮಾತ್ರ ಹೆಚ್ಚಾಗಿರಲಿಲ್ಲ. ಈ ಬಾರಿ ಫಸಲು ಹೆಚ್ಚಾಗುವ ಲಕ್ಷಣಗಳಿದ್ದು, ರೈತರು ಆದಾಯ ಗಳಿಸಬಹುದೆಂಬ ಭಾರೀ ನಿರೀಕ್ಷೆಯಲ್ಲಿದ್ದಾರೆ.
ಹೂವು ಬಿಟ್ಟ ಸಂದರ್ಭದಲ್ಲಿ ಕಾಯಿಗಳು ಗೋಲಿ ಗಾತ್ರದ್ದಾಗುವವರೆಗೆ ಗಿಡಗಳಿಗೆ ನೀರುಣಿಸಬಾರದು. ಮಾರ್ಚ್ನಲ್ಲಿ ಬಿಸಿಲು ಹೆಚ್ಚಾದಂತೆ ಭೂಮಿಗೆ ನೀರು ಹರಿಸಬೇಕು. ಇದರಿಂದ ಕಾಯಿಗಳು ಬಲಿಯಲು ಅನುಕೂಲವಾಗುತ್ತದೆ. ಈ ಹಂತದಲ್ಲಿ ನೀರು ನಿರ್ವಹಣೆ, ಜಿಗಿಹುಳು, ಬೂದಿರೋಗ, ಚಿಬ್ಬುರೋಗ, ಕಾಯಿ ಹಳದಿಯಾಗುವುದರ ನಿಯಂತ್ರಣಕ್ಕೆ ಸಂಯುಕ್ತ ಶಿಲೀಂದ್ರನಾಶಕ ಔಷಧ ಸಿಂಪರಣೆ ಕೈಗೊಳ್ಳಬೇಕು. ಅಲ್ಲಲ್ಲಿ ಮೋಹಕ ಬಲೆಗಳನ್ನು ಅಳವಡಿಸಬೇಕು | ಮಂಜುನಾಥ ಬಣಕಾರ, ಹಿರಿಯ ತೋಟಗಾರಿಕೆ ನಿರ್ದೇಶಕರು ಹಾನಗಲ್ಲ