ರೈತರಿಗೆ ಶೀಗಿ ಹುಣ್ಣಿಮೆ ಸಂಭ್ರಮ

16-HN SHIGI
Published on

ಹಾನಗಲ್ಲ: ಜಿಲ್ಲಾದ್ಯಂತ ಗುರುವಾರ ಹೊಲ-ಗದ್ದೆಗಳು ಮತ್ತು ತೋಟಗಳಲ್ಲಿ ಭೂಮಿ ಹುಣ್ಣಿಮೆಯ ಸಡಗರ. ಭೂ ತಾಯಿಗೆ ಪೂಜೆ ಮಾಡಿ ಚರಗ ಚೆಲ್ಲುವ ಶೀಗಿ ಹುಣ್ಣಿಮೆ ಆಚರಣೆ ರೈತರ ಸಂಭ್ರಮದ ಹಬ್ಬ.

ವರ್ಷವಿಡೀ ಕಷ್ಟ ಪಟ್ಟು ಬೆಳೆದ ಫಸಲನ್ನು ಪೂಜೆ ಮಾಡಿ, ಹಸಿರು ಸೀರೆಯುಟ್ಟ ಭೂ ತಾಯಿಯನ್ನು ಆರಾಧಿಸುವ ಶುಭ ಗಳಿಗೆ. ಮುಂಗಾರು ಬೆಳೆಗಳಿಂದ ಮಡಿಲು ತುಂಬಿಕೊಂಡು ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಾಗಿ ಕಾಣುವಂಥ ಹೊಲಗಳಲ್ಲಿ ಫಸಲುಗಳೆಲ್ಲ ಕೊಯ್ಲಿಗೆ ಬಂದಿರುವ ಈ ಹೊತ್ತಿನಲ್ಲಿ ಭೂಮಿತಾಯಿಗೆ ಬಾಗಿನ ಅರ್ಪಣೆ, ಉಡಿ ತುಂಬುವುದು, ಚರಗ ಚೆಲ್ಲಿ ಭಕ್ತಿ ಸಮರ್ಪಿಸುವುದು ಉತ್ತರ ಕರ್ನಾಟಕದಾದ್ಯಂತ ನಡೆಯುವ ವಿಶಿಷ್ಠ ಸಂಪ್ರದಾಯ.

ಮುಂಗಾರು ಮಳೆ ಮುಗಿಯುತ್ತ ಬಂದಂತೆ ಭತ್ತ, ಅಡಕೆ, ಬಾಳೆ, ಜೋಳ, ಹತ್ತಿ, ದ್ವಿದಳ ಧಾನ್ಯ ಸೇರಿ ಎಲ್ಲ ಫಸಲನ್ನೂ ಹೊತ್ತು ಮೈದುಂಬಿಕೊಂಡಿರುತ್ತಾಳೆ. ರೈತರು ಕುಟುಂಬ ಸದಸ್ಯರು, ಬಂಧು-ಬಾಂಧವರು, ನೆರೆ-ಹೊರೆಯವರೊಂದಿಗೆ ಅಲಂಕೃತ ಚಕ್ಕಡಿ ಗಾಡಿಯಲ್ಲಿ ಕುಳಿತು ಹೊಲಗಳಿಗೆ ತೆರಳುವುದನ್ನು ನೋಡುವುದೇ ಹಬ್ಬ.

ಗರ್ಭವತಿ ಭೂಮಿತಾಯಿಗೆ ತವರು ಮನೆಯವರು ಮಗಳ ಸೀಮಂತ ಕಾರ್ಯ ಮಾಡುವಾಗ ಮಗಳಿಗೆ ಬಯಕೆ ತೀರಿಸಲು ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸಿ ನೀಡುವಂತೆ ರೈತರೂ ಭೂಮಿತಾಯಿ ಮತ್ತು ಬೆಳೆಯನ್ನು ಪೂಜಿಸುವ ಮೂಲಕ ಭೂ ತಾಯಿಗೆ ಸೀಮಂತ ಕಾರ್ಯ ಮಾಡುತ್ತಾರೆ. ಹೊಸ ಫಸಲಿಗೆ ಹೊಸ ಸೀರೆ-ಕುಪ್ಪಸದಿಂದ ಅಲಂಕರಿಸಿ, ಪೂಜೆ ಮಾಡಿ ವಿವಿಧ ಖಾದ್ಯಗಳನ್ನು ನೈವೇದ್ಯ ಸಮರ್ಪಿಸುತ್ತಾರೆ.

ನಂತರ ಹೊಲದಲ್ಲಿ ಕುಳಿತು ಕಡಕ್ ರೊಟ್ಟಿ, ಬದನೆಕಾಯಿ ಎಣಗಾಯಿ, ಕಾಳು, ಹಿಟ್ಟಿನ ಪಲ್ಯ, ವಿವಿಧ ಬಗೆಯ ಚಟ್ನಿ ಪುಡಿ, ಮೆಣಸಿನಕಾಯಿ ಚಟ್ನಿ, ಮೊಸರುಬುತ್ತಿ, ಅರಿಷಿಣ ಎಲೆಯ ಕೊಟ್ಟಿಯ ಕಡಬು, ಗೇರು ಎಲೆಯ ಕುಂಬಳಕಾಯಿ ಕಡಬು, ಹೋಳಿಗೆ ಸೇರಿ ವಿಧವಿಧವಾದ ಹಬ್ಬದಡಿಗೆ ಊಟ ಮಾಡಿ ಸಂಭ್ರಮಿಸುತ್ತಾರೆ.

ವೈಜ್ಞಾನಿಕ ಹಿನ್ನೆಲೆ: ಶೀಗಿ ಹಿಣ್ಣಿಮೆ ಆಚರಣೆಗೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಫಸಲು ಕೊಯ್ಲಿನ ಸಂದರ್ಭದಲ್ಲಿ ಹುಳುಗಳ ಕಾಟ ಹೆಚ್ಚಾಗುವ ಕಾಲವಾಗಿರುತ್ತದೆ. ತರಕಾರಿ, ಹಲವು ಗಿಡಮೂಲಿಕೆ ಸಸ್ಯಗಳಿಂದ ಚರಗ ತಯಾರಿಸಲಾಗುತ್ತದೆ. ಅದನ್ನು ಹೊಲದಲ್ಲಿ ಚೆಲ್ಲುವುದರಿಂದ ಹುಳುವಿನ ಬಾಧೆ ತಡೆಗಟ್ಟಬಹುದು ಎಂಬುದು ರೈತರ ನಂಬಿಕೆಯಾಗಿದೆ.

ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ಮುಂಗಾರು ಆರಂಭದಿಂದಲೂ ಭೂಮಿಯನ್ನು ಹದಗೊಳಿಸಿ, ಉತ್ತಿ-ಬಿತ್ತಿ ಹಸನುಗೊಳಿಸಿ ಫಸಲು ಬರುವವರೆಗೆ ರೈತರು ಶ್ರಮಪಡುತ್ತಾರೆ. ಫಸಲು ಕೊಯ್ಲಿಗೆ ಬಂದಾಗ ಭೂ ತಾಯಿಗೆ ಪೂಜೆ ಸಲ್ಲಿಸುವ ಸಂಭ್ರಮ. ಅದರೊಂದಿಗೆ ಬಂಧು-ಬಳಗದೊಂದಿಗೆ ಹಬ್ಬದೂಟ ಮಾಡುವ ಮೂಲಕ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ.| ಮರಿಗೌಡ ಪಾಟೀಲ ಚೀರನಹಳ್ಳಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net