

ಹಾನಗಲ್ಲ: ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಹಾನಗಲ್ಲ ತಾಲೂಕು ಮಲೆನಾಡು ಮತ್ತು ಉತ್ತರ ಕರ್ನಾಟಕ ಜೋಡಿಸುವ ಕೊಂಡಿಯಾಗಿದೆ. ಶಿವಮೊಗ್ಗದಿಂದ ಹಾನಗಲ್ಲ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಮಾರ್ಗ ನಿರ್ವಿುಸುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದೆ.
ಈಗಾಗಲೇ ಶಿವಮೊಗ್ಗದಿಂದ ತಾಳಗುಪ್ಪದವರೆಗೆ ರೈಲು ಮಾರ್ಗ ನಿರ್ವಣವಾಗಿದೆ. ಅದರ ಮುಂದಿನ ಮಾರ್ಗದ ಪ್ರಾಥಮಿಕ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ 2023ರಲ್ಲಿ ವರದಿಯೂ ಸಲ್ಲಿಕೆಯಾಗಿದೆ. ಅಂತಿಮ ಸ್ಥಳ ಸಮೀಕ್ಷೆ ಕಾರ್ಯ ಕೈಗೊಳ್ಳುವ ಹಂತದಲ್ಲಿದೆ. ಶಿವಮೊಗ್ಗದಿಂದ ಸಾಗರ, ತಾಳಗುಪ್ಪ 97 ಕಿ.ಮೀ. ರೈಲು ಮಾರ್ಗ ಮುಂದುವರಿಸಿ ಸಿದ್ದಾಪುರ, ಶಿರಸಿ, ಮುಂಡಗೋಡ, ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂರ್ಪಸುವ 167 ಕಿ.ಮೀ. ಉದ್ದದ, 3115 ಕೋಟಿ ರೂಪಾಯಿ ಅಂದಾಜು ವೆಚ್ಚದ ನೂತನ ರೈಲುಮಾರ್ಗದ ನಕ್ಷೆ ರೂಪಿಸಲಾಗಿದೆ. ಆದರೆ, ಈ ಯೋಜನೆಯಿಂದ ಹಾನಗಲ್ಲ ಹೊರಗುಳಿಯುವಂತಾಗಿರುವುದು ತಾಲೂಕಿನ ಜನತೆಯ ನೋವಿಗೆ ಕಾರಣವಾಗಿದೆ.
ಹಾನಗಲ್ಲ ತಾಲೂಕು ಸುಮಾರು 2.70 ಲಕ್ಷ ಜನಸಂಖ್ಯೆ ಹೊಂದಿದೆ. ಈ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ರೈಲು ಮಾರ್ಗದ ಅಗತ್ಯವಿದೆ. ಈ ಭಾಗದಲ್ಲಿ ವಾಣಿಜ್ಯ ಬೆಳೆಗಳಾದ ಅಡಕೆ, ಮಾವು, ಶುಂಠಿ, ಹಸಿಮೆಣಸು, ಗೋವಿನಜೋಳ, ಭತ್ತ ಸೇರಿದಂತೆ ಇತರ ಫಸಲುಗಳನ್ನು ಅಂತಾರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಮಾವು, ಶುಂಠಿ, ಹಸಿಮೆಣಸು ಮುಂಬೈ ಮತ್ತು ದೆಹಲಿಗೆ ಇಲ್ಲಿಂದಲೇ ರವಾನೆಯಾಗುತ್ತವೆ. ಈ ನಿಟ್ಟಿನಲ್ಲಿ ರೈಲುಮಾರ್ಗ ಸೌಲಭ್ಯ ಕಲ್ಪಿಸಿದಲ್ಲಿ ಈ ಭಾಗದವರಿಗೆ ವಾಣಿಜ್ಯ ಚಟುವಟಿಕೆ, ಶಿಕ್ಷಣ ಹಾಗೂ ಅಗತ್ಯ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗಲಿದೆ ಎಂಬದು ಸಾರ್ವಜನಿಕರ ಆಶಯವಾಗಿದೆ.
ಹಾನಗಲ್ಲ ತಾಲೂಕು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗಿಲ್ಲ. ಹೀಗಾಗಿ ತಾಲೂಕಿನ ಬಹುತೇಕ ಸಾರ್ವಜನಿಕರು ಹುಬ್ಬಳ್ಳಿಯನ್ನೇ ಅವಲಂಬಿಸಿದ್ದಾರೆ. ಮೂಲಸೌಕರ್ಯಗಳ ಕೊರತೆಯಿಂದ ತಾಲೂಕಿನ ಜನ ಭ್ರಮನಿರಸನಗೊಳ್ಳುವಂತಾಗಿದೆ. ಮಲೆನಾಡಿನ ರೈಲುಗಳು ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ರೈಲು ಮಾರ್ಗ ಹಾನಗಲ್ಲ ತಾಲೂಕನ್ನೂ ಒಳಗೊಳ್ಳಬೇಕು ಎಂಬ ಮಹದಾಸೆ ಇಲ್ಲಿಯವರದಾಗಿದೆ.
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗ ಹಾನಗಲ್ಲ ಪಟ್ಟಣದಲ್ಲಿ ಹಾದು ಹೋದರೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಸಾರ್ವಜನಿಕರಿಗೂ ಪ್ರಮುಖ ನಗರಗಳ ಸಂಪರ್ಕ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಹಾವೇರಿ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳ ಸಂಸದರು ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಈ ಹಿಂದೆ ಸಾಗರ ರೈಲು ನಿಲ್ದಾಣದಿಂದ ಸೊರಬ, ಆನವಟ್ಟಿ ಹಾನಗಲ್ಲ, ಬಂಕಾಪುರ ಮಾರ್ಗವಾಗಿ ಯಲವಿಗಿ ರೈಲು ನಿಲ್ದಾಣ ಸಂರ್ಪಸುವ ರೈಲು ಮಾರ್ಗ ನಿರ್ವಿುಸುವಂತೆ ಈ ಎಲ್ಲ ತಾಲೂಕುಗಳ ಸಾರ್ವಜನಿಕರು ಹಿಂದಿನ ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಕೇಂದ್ರ ಸರ್ಕಾರದವರೆಗೆ ಈ ಕೂಗು ತಲುಪಲು ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ ಮನೆಮಾಡಿದೆ.
ಹಾನಗಲ್ಲ ತಾಲೂಕಿಗೆ ರಾತ್ರಿ 9 ಗಂಟೆಯ ನಂತರ ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿಗಳಿಂದಲೂ ಬಸ್ ಸೇರಿದಂತೆ ಯಾವುದೇ ವಾಹನ ಸೌಕರ್ಯಗಳಿಲ್ಲ. ಹಾನಗಲ್ಲ ತಾಲೂಕಿನಲ್ಲಿ ಉದ್ಯೋಗ ಆಧಾರಿತ ಯಾವುದೇ ಕೈಗಾರಿಕೆಗಳು ಮತ್ತು ಉದ್ಯಮಗಳು ಇಲ್ಲದಿರುವುದರಿಂದ ಬೇರೆ-ಬೇರೆ ಮಹಾನಗರಗಳನ್ನೇ ಅವಲಂಬಿಸುವ ಸ್ಥಿತಿಯಿದೆ. ಹೀಗಾಗಿ ಹಾನಗಲ್ಲಿಗೆ ರೈಲು ಮಾರ್ಗ ಅತ್ಯಂತ ಅಗತ್ಯವೆನ್ನುವಂತಾಗಿದೆ.
ತಾಳಗುಪ್ಪ, ಶಿರಸಿ, ಹುಬ್ಬಳ್ಳಿ ನೂತನ ರೈಲುಮಾರ್ಗ ಹಾನಗಲ್ಲ ಪಟ್ಟಣ ಸಂರ್ಪಸುಂತೆ ರೈಲ್ವೆ ಯೋಜನೆ ರೂಪಿಸಬೇಕು. ಈ ಕುರಿತಂತೆ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಶೀಘ್ರದಲ್ಲಿ ಸಭೆ ಆಯೋಜಿಸಲಾಗುವುದು. ರೈಲ್ವೆ ಯೋಜನೆ ರೂಪಿಸಲು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನೂ ಸಂರ್ಪಸಿ ಹಾನಗಲ್ಲ ತಾಲೂಕನ್ನೂ ಒಳಗೊಳ್ಳುವಂತೆ ಒತ್ತಾಯಿಸಲಾಗುವುದು. ರೈಲು ಸಂಪರ್ಕದಿಂದ ಹಾನಗಲ್ಲ ತಾಲೂಕು ವಂಚಿತವಾಗದಂತೆ ಹಕ್ಕೊತ್ತಾಯ ಮಂಡಿಸಲಾಗುವುದು. | ಸೋಮಶೇಖರ ಕೋತಂಬರಿ, ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ರಾಜ್ಯದಲ್ಲಿಯೇ ಅತಿದೊಡ್ಡ ತಾಲೂಕುಗಳಲ್ಲೊಂದಾದ ಹಾನಗಲ್ಲಿಗೆ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ. ತಾಲೂಕಿನ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಂಸದರು ರೈಲ್ವೆ ಸಚಿವರಿಗೆ ಸಾರ್ವಜನಿಕರ ರೈಲು ಸೇವೆ ಅಗತ್ಯ ಕುರಿತು ಮನವರಿಕೆ ಮಾಡಿ ಹಾನಗಲ್ಲ ತಾಲೂಕನ್ನೂ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು. ರೈಲು ಮೂಲಕ ದೂರದ ನಗರಗಳಿಗೆ ಸಂಚರಿಸಲು ಹಾನಗಲ್ಲಿನಿಂದ ಹುಬ್ಬಳ್ಳಿಗೆ ತೆರಳುವ ಅನಿವಾರ್ಯತೆ ತಪ್ಪಿಸಬೇಕು. | ಮನೋಹರ ತಹಶೀಲ್ದಾರ, ಮಾಜಿ ಸಚಿವ