

ಹಾನಗಲ್ಲ: ಶಿಕ್ಷಕರಿಗೆ ತಂದೆ-ತಾಯಿಗಿಂತಲೂ ಉನ್ನತ ಸ್ಥಾನ ಕಲ್ಪಿಸಲಾಗಿದೆ. ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವ ಶಿಕ್ಷಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ. ಹೀಗಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಮಂತಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ವರ್ಗಕೋಣೆಗಳಲ್ಲಿ ಅಡಗಿದೆ. ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳ ಭವಿಷ್ಯಕ್ಕೆ ಗಟ್ಟಿ ಅಡಿಪಾಯ ಹಾಕಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆ ತಂದು, ಮಕ್ಕಳಿಗೆ ತಜ್ಞರಿಂದ ಅಗತ್ಯ ತರಬೇತಿ, ಮಾರ್ಗದರ್ಶನ ದೊರಕಿಸುವ ಉದ್ದೇಶವಿದೆ ಎಂದರು.
ಶಿಕ್ಷಕ ಹಿದಾಯತ್‌ಉಲ್ಲಾ ರಟ್ಟೀಹಳ್ಳಿ ಮಾತನಾಡಿ, ಜ್ಞಾನದ ವಾರಸುದಾರರಾಗಿರುವ ಶಿಕ್ಷಕರಿಗೆ ಶ್ರೇಷ್ಠ ಸ್ಥಾನ ಕಲ್ಪಿಸಲಾಗಿದೆ. ಈ ಪವಿತ್ರ ವೃತ್ತಿಯ ಘನತೆ, ಗೌರವಗಳನ್ನು ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದರು.
ವರ್ಗಾವಣೆಗೊಂಡ ಶಿಕ್ಷಕರಾದ ಅಜಮತ್‌ಉಲ್ಲಾ, ಸರ್ತಾಜ್‌ಬಾನು ಅವರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸಿಕಂದರ ವಾಲಿಕಾರ, ಇಸಾಕ್‌ಅಹ್ಮದ್ ಸವಣೂರ, ಅಬ್ದುಲ್‌ರೆಹೆಮಾನ್ ಅಂಗಡಿ, ಮಹ್ಮದಜಾಫರ್ ಹಿರೂರ, ಜಗದೀಶ ಮಾಯಣ್ಣನವರ, ಗಿರೀಶ ವಡ್ಡರ, ಇಸಾಕಅಹ್ಮದ್ ಶಿರಗೋಡ, ರವಿ ನಾಗರವಳ್ಳಿ, ಪ್ರವೀಣ ಭೈರಕ್ಕನವರ, ಮೊಹಿದ್ದೀನ್ ಮುಂಡರಗಿ, ನೂರಅಹ್ಮದ್ ಹಿರೂರ, ಜೆ.ಎಂ. ಅಂಗಡಿ ಇದ್ದರು.