

ಹಾನಗಲ್ಲ: ಕಾಂಗ್ರೆಸ್ ಸರ್ಕಾರ 100 ದಿನಗಳಲ್ಲಿ 4 ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದೆ. ಸರ್ಕಾರ ರಚನೆಯ ಬಳಿಕ ಗ್ಯಾರಂಟಿ ಜಾರಿಯಾಗುವುದಿಲ್ಲ ಎಂದು ಹೇಳಿ ಗೊಂದಲ ಸೃಷ್ಟಿಸುತ್ತಿದ್ದ ವಿರೋಧ ಪಕ್ಷಗಳ ಬಾಯಿಗೂ ಬೀಗ ಬಿದ್ದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಥಿಕ ಸಂಕಷ್ಟದಿಂದ ಜನರು ಬಳಲುತ್ತಿದ್ದಾರೆ. ಇದೀಗ ಯೋಜನೆಯ ಮೂಲಕ ಅಶಕ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ತಾಲೂಕಿನಲ್ಲಿ ಯೋಜನೆಗೆ 65 ಸಾವಿರ ಕುಟುಂಬಗಳು ಅರ್ಹವಿದ್ದು, ಈ ಪೈಕಿ 59 ಸಾವಿರ ಜನ ನೋಂದಣಿ ಮಾಡಿದ್ದಾರೆ. ಬಡವರಿಗಾಗಿ ರೂಪಿಸಿರುವ ಇಂಥ ಯೋಜನೆಗಳನ್ನು ಅರ್ಹರು ಪಡೆಯಬೇಕು. ಅನರ್ಹರು ಸೌಲಭ್ಯ ಪಡೆದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸಿಡಿಪಿಒ ರಂಗನಾಥ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯಕ್ಕೆ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕು ಮೊದಲ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಇನ್ನೂ 6 ಸಾವಿರ ಕುಟುಂಬಗಳ ನೋಂದಣಿ ಬಾಕಿ ಇದೆ. ತಾಂತ್ರಿಕ ದೋಷ ಸರಿಪಡಿಸಿ ಅರ್ಹ ಕುಟುಂಬಗಳನ್ನು ಯೋಜನೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ರವಿಕುಮಾರ ಕೊರವರ, ಯಲ್ಲಪ್ಪ ಕಿತ್ತೂರ, ಅನಂತವಿಕಾಸ ನಿಂಗೋಜಿ, ಖುರ್ಷಿದ್ ಹುಲ್ಲತ್ತಿ, ಮಹೇಶ ಪವಾಡಿ, ಶಂಶಿಯಾ ಬಾಳೂರ, ಪರಶುರಾಮ ಖಂಡೂನವರ, ಹಸಿನಾಬಿ ನಾಯ್ಕನವರ, ಮಮತಾ ಆರೆಗೊಪ್ಪ, ಉಮೇಶ ಗೌಳಿ, ಖ್ವಾಜಾಮೊಹಿದ್ದೀನ ಜಮಾದಾರ, ವಿಜಯಕುಮಾರ ದೊಡ್ಡಮನಿ, ವೈ.ಎಚ್. ಜಗದೀಶ ಇದ್ದರು.