

ಹಾನಗಲ್ಲ: ಪಟ್ಟಣದ ಜನತೆಗೆ ಕುಡಿಯುವ ನೀರಿನ ಕೊರತೆ ನೀಗಿಸುವ 35.54 ಕೋಟಿ ರೂ.ಗಳ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆ ಜಾರಿಗೊಂಡಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಮುಂದಿನ ಬೇಸಿಗೆ ಅವಧಿ ಹೊತ್ತಿಗೆ ಪಟ್ಟಣದ ಜನತೆ ಕುಡಿಯುವ ನೀರು ಸಾಲದು ಎಂಬ ಕೊರಗಿನಿಂದ ಹೊರಬರಲಿದ್ದಾರೆ.
ಪಟ್ಟಣದ 35 ಸಾವಿರ ನಾಗರಿಕರಿಗೆ ಕುಡಿಯುವ ನೀರಿನ ಮೂಲವಾಗಿರುವ ಆನೆಕೆರೆಗೆ ಮಳೆಗಾಲದಲ್ಲಿ ಹಿರೇಕಣಗಿ, ಚಿಕ್ಕೇರಿಹೊಸಳ್ಳಿ ಗ್ರಾಮಗಳ ಕೆರೆಗಳು ತುಂಬಿದ ನಂತರ ಝಡತಿ ಕಾಲುವೆ ಮೂಲಕ ನೀರು ಬಂದು ಸೇರುತ್ತಿತ್ತು. ಡಿಸೆಂಬರ್ ಹೊತ್ತಿಗೆ ನೀರು ಖಾಲಿಯಾಗುತ್ತಿತ್ತು. ಕೊರತೆ ನೀಗಿಸಲು ಮಳಗಿಯ ಧರ್ಮಾ ಜಲಾಶಯದಿಂದ ಕಾಲುವೆ ಮೂಲಕ ಧರ್ಮಾ ನದಿಗೆ ಹರಿಸಿ ಅಲ್ಲಿಂದ ಜಾಕ್‌ವೆಲ್ ಮೂಲಕ ಆನೆಕೆರೆ ತುಂಬಿಸಲಾಗುತ್ತಿತ್ತು. ಇದರ ಮಧ್ಯೆ ಕಾಲುವೆ, ನದಿಗಳಲ್ಲಿ ಜಲಾಶಯದ ಬಹಳಷ್ಟು ನೀರು ಪೋಲಾಗುತ್ತಿತ್ತು. ಅದಕ್ಕೀಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯಡಿ ಪರಿಹಾರ ದೊರಕಿಸುವ ಯತ್ನ ನಡೆದಿದೆ.
ಯೋಜನೆ ಹೀಗಿದೆ: ಧರ್ಮಾ ಜಲಾಶಯದಲ್ಲಿ ಜಾಕ್‌ವೆಲ್ ನಿರ್ಮಿಸಿ ಅದರಲ್ಲಿ 200 ಅಶ್ವ ಶಕ್ತಿಯ 2 ಯಂತ್ರಗಳನ್ನು ಸ್ಥಾಪಿಸಿ, ಸಂಪರ್ಕ ಸೇತುವೆ, ಇಂಟೇಕ್‌ವೆಲ್ ಮೂಲಕ ನೀರೆತ್ತಲಾಗುತ್ತಿದೆ. ಜಲಾಶಯದಿಂದ ಮಳಗಿ, ಕೊಳಗಿ, ಮಂತಗಿ, ಕಾಮನಹಳ್ಳಿ ಮಾರ್ಗವಾಗಿ 18 ಕಿ.ಮೀ. ಎಂಎಸ್ ಪೈಪ್ ಅಳವಡಿಸಿ, ಟ್ರೀ-ಪಾರ್ಕ್ ಮೂಲಕ ಹಾನಗಲ್ಲ ಹೊರವಲಯದ ನೀರು ಶುದ್ಧೀಕರಣ ಘಟಕಕ್ಕೆ ನೀರನ್ನು ರವಾನಿಸಲಾಗುತ್ತದೆ. ಹಾನಗಲ್ಲಿನ 110 ಕೆವಿ ವಿದ್ಯುತ್ ವಿತರಣೆ ಕೇಂದ್ರದಿಂದ 16 ಕಿ.ಮೀ. ಗಳ 11 ಕೆವಿ ಎಕ್ಸ್‌ಪ್ರೆಸ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಕೇಂದ್ರ ಸರ್ಕಾರ 15.68 ಕೋಟಿ ರೂ., ರಾಜ್ಯ ಸರ್ಕಾರ 12.55 ಕೋಟಿ ರೂ., ಪುರಸಭೆ 7.30 ಕೋಟಿ ರೂ.ಗಳನ್ನು ಇದಕ್ಕಾಗಿ ಒದಗಿಸುತ್ತಿವೆ.
ಯೋಜನೆ ಅಗತ್ಯತೆ: ಇತ್ತೀಚಿನ ವರ್ಷಗಳಲ್ಲಿ ಆನೆಕೆರೆಯಲ್ಲಿ ಶಿಲೀಂದ್ರ (ಫಂಗಸ್) ಬೆಳೆದು ಬೇಸಿಗೆಯಲ್ಲಿ ನೀರು ಶುದ್ಧೀಕರಣಕ್ಕೆ ಸಮಸ್ಯೆ ಆಗುತ್ತಿತ್ತು. ಇದರಿಂದ ಸರಬರಾಜು ಕೂಡ ವಿಳಂಬವಾಗುತ್ತಿತ್ತು. ನೀರಿನ ಸಮಸ್ಯೆಯಿಂದಾಗಿ ಜನತೆ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದರು. ಜಲಾಶಯದಿಂದ ಆನೆಕೆರೆಗೆ ನೀರು ತರುವ ಮಧ್ಯೆ ಕೆಲ ರೈತರು ಹೊಲಗಳಿಗೆ ಹರಿಸುತ್ತಿದ್ದರು. ಹೀಗಾಗಿ, ಜಲಾಶಯದ ನೀರು ಪೂರ್ಣ ಪ್ರಮಾಣದಲ್ಲಿ ಬಂದು ಸೇರುತ್ತಿರಲಿಲ್ಲ. ಎಲ್ಲ ಸಮಸ್ಯೆ ತಪ್ಪಿಸಲು ಜಲಾಶಯದಿಂದ ನೇರವಾಗಿ ಶುದ್ಧೀಕರಣ ಘಟಕಕ್ಕೆ ಕೊಂಡೊಯ್ಯುವ ಯೋಜನೆಯ ಪ್ರಸ್ತಾವನೆಯನ್ನು 2023ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸದ್ಯ 10 ಲಕ್ಷ ಲೀ. ಸಾಮರ್ಥ್ಯದ ಒಂದು ನೆಲಮಟ್ಟದ ಜಲಾಗಾರ, 5 ಲಕ್ಷದ ಎರಡು ಮೇಲ್ಮಟ್ಟದ ಜಲಾಗಾರಗಳಿದ್ದು, 35 ಸಾವಿರ ಜನಸಂಖ್ಯೆಗೆ ಸಾಕಾಗುವಂತಿದೆ. ಮುಂದಿನ 2055ರ ಜನಸಂಖ್ಯೆಗೆ ಅನುಗುಣವಾಗಿ 15 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಾಗಾರ ನಿರ್ಮಾಣ, ಶುದ್ಧೀಕರಣ ಘಟಕದ ದುರಸ್ತಿ ಕಾಮಗಾರಿ ಯೋಜನೆಯಲ್ಲಿವೆ.
ಬಾಳಂಬೀಡದಿಂದಲೂ ನೀರು: ಇತ್ತೀಚೆಗೆ ಆರಂಭಗೊಂಡಿರುವ ಬಾಳಂಬೀಡ ಏತ ನೀರಾವರಿ ಯೋಜನೆಯ ನೀರು ಪಟ್ಟಣದ ಆನೆಕೆರೆ ತಲುಪಿದ್ದು, ಕೆರೆ ತುಂಬಿಸಲು ಸಹಕಾರಿಯಾಗಿದೆ. ಆನೆಕೆರೆಗೆ ಝಡತಿ ಕಾಲುವೆ, ಧರ್ಮಾ ಜಲಾಶಯದ ನೀರು ಸೇರಿ ಈಗ ವರದಾ ನದಿ ಮೂಲದ ಬಾಳಂಬೀಡ ಏತ ನೀರಾವರಿ ಯೋಜನೆಯ ನೀರೂ ಬರುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕುತ್ತಿದೆ ಎಂಬ ಸಮಾಧಾನ ವ್ಯಕ್ತವಾಗುತ್ತಿದೆ. ಧರ್ಮಾ ಜಲಾಶಯದಲ್ಲಿ ಒಟ್ಟು 0.78 ಟಿಎಂಸಿ ಅಡಿ ನೀರಿನ ಸಾಮರ್ಥ್ಯವಿದ್ದು, ಈವರೆಗೆ ಪ್ರತಿವರ್ಷ 0.20 ಟಿಎಂಸಿ ಅಡಿ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಈಗ ಪೈಪ್‌ಲೈನ್ ಅಳವಡಿಸುತ್ತಿರುವುದರಿಂದ ಪೋಲಾಗುತ್ತಿರುವ ನೀರಿನ ಪ್ರಮಾಣ ತಗ್ಗುತ್ತಿದೆ. ಈಗ 0.0565 ಟಿಎಂಸಿ ಅಡಿ ನೀರನ್ನು ಮಾತ್ರ ಎತ್ತುವಳಿ ಮಾಡಲಾಗುತ್ತದೆ.
ಪ್ರತಿ ವರ್ಷ ಆನೆಕೆರೆಯಲ್ಲಿ ನೀರಿನ ಕೊರತೆ, ಫಂಗಸ್ ಸಮಸ್ಯೆಗಳಿಂದಾಗಿ ನೀರು ಪೂರೈಸಲು ಪುರಸಭೆ ಸಂಕಷ್ಟ ಎದುರಿಸುತ್ತಿತ್ತು. ಧರ್ಮಾ ಜಲಾಶಯದಲ್ಲಿ 12 ಅಡಿ ನೀರು ಮೀಸಲಿಟ್ಟರೂ ಅದನ್ನು ಆನೆಕೆರೆಗೆ ತರಲು ಸಮಸ್ಯೆಗಳಿದ್ದವು. ಸದ್ಯ ನಾಲ್ಕೈದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಲಾಶಯದಿಂದ ನೇರ ಪೈಪ್‌ಲೈನ್ ಯೋಜನೆ ಅನುಷ್ಠಾನದ ನಂತರ ಪ್ರತಿದಿನ ಮನೆ ಮನೆಗೆ ನೀರು ಸರಬರಾಜು ಮಾಡಬಹುದು.ನಾಗರಾಜ ಮಿರ್ಜಿ ಇಂಜಿನಿಯರ್ ಪುರಸಭೆ ಹಾನಗಲ್ಲ