ಜನಪ್ರತಿನಿಧಿಗಳು, ನೌಕರರು ಜೋಡೆತ್ತಿನಂತೆ ಶ್ರಮಿಸಲಿ

2-HNL- SANMAMN MANE
Published on

ಹಾನಗಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಜೋಡೆತ್ತಿನಂತೆ ಕಾರ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಬಡವರಿಗೆ ಶಕ್ತಿ ತುಂಬಲು ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಂದಿನ 5 ವರ್ಷಗಳ ಅವಧಿಯಲ್ಲಿ ಸಂಪೂರ್ಣ ಬದಲಾವಣೆಗಳೊಂದಿಗೆ ಬಲಿಷ್ಠ ರಾಜ್ಯ ನಿರ್ಮಾಣದ ಕನಸು ಹೊಂದಲಾಗಿದೆ. ಕನಸಿನ ಸಾಕಾರಕ್ಕೆ ಸರ್ಕಾರಿ ನೌಕರರು ಪ್ರಾಮಾಣಿಕತೆ, ದಕ್ಷತೆ ಮತ್ತು ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ಆಡಳಿತದ ರೀತಿ, ನೀತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಜನರ ಬಳಿಗೆ ಆಡಳಿತ ಕೊಂಡೊಯ್ಯಬೇಕಿದೆ. ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ದೊರಕಿಸಬೇಕಿದೆ. ಸರ್ಕಾರಿ ನೌಕರರಿಗೆ ಮತ್ತೆ ಹಳೇ ಪಿಂಚಣಿ ಜಾರಿ ಬಗ್ಗೆ ನನ್ನ ಸಹಮತವಿದೆ ಎಂದರು.
ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸನ್ಮಾನ ಸ್ವೀಕರಿಸಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಎಂ. ಪಾಟೀಲ ಮಾತನಾಡಿ, ಸಂಘ ಕಾಲಕಾಲಕ್ಕೆ ಸರ್ಕಾರಿ ನೌಕರರ ಹಿತಕ್ಕೆ ಮಾರಕವಾಗಿರುವ ಕಾನೂನುಗಳ ವಿರುದ್ಧ ಹೋರಾಟ ನಡೆಸಿ ನ್ಯಾಯ ದೊರಕಿಸುವ ಕೆಲಸ ಮಾಡಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಮಾತನಾಡಿ, ಸಮಸ್ಯೆ, ಸವಾಲುಗಳ ಮಧ್ಯೆ ಸರ್ಕಾರಿ ನೌಕರರು ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ. ನೌಕರರ ಹಿತಕ್ಕೆ ಸರ್ಕಾರವೂ ಸ್ಪಂದಿಸಬೇಕಿದೆ. ಸರ್ಕಾರ 7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪುರಸಭೆ ಮಾಜಿ ಉಪಾಧ್ಯಕ್ಷೆ ಶಂಶಿಯಾಬಾನು ಬಾಳೂರ, ತಾಪಂ ಇಒ ಬಿ. ಸುನೀಲಕುಮಾರ, ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ. ಪಾಟೀಲ, ಸಂಘದ ಕಾರ್ಯದರ್ಶಿ ಮಕ್ಬೂಲ್ ಇಂಗಳಹಳ್ಳಿ, ಜಿ.ಬಿ. ಚಿಕ್ಕೇರಿ, ಮಹೇಶ ನಾಯ್ಕ, ಎಸ್.ಕೆ. ದೊಡ್ಡಮನಿ, ಎನ್.ವಿ. ಅಗಸನಹಳ್ಳಿ, ಅನಿಲಕುಮಾರ ಗೊಣ್ಣೆಣ್ಣನವರ, ಪಿ.ಆರ್. ಚಿಕ್ಕಳ್ಳಿ, ಗುರುನಾಥ ಗವಾಣಿಕರ, ಸಿದ್ದು ಗೌರಣ್ಣನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net