ಸಿಎಂಗೆ ಉಪ ಆತಂಕ ಹೆಚ್ಚಳ: ಭವಿಷ್ಯದ ನಾಯಕತ್ವ ಸವಾಲು, ಆಪ್ತರೊಂದಿಗೆ ಬೊಮ್ಮಾಯಿ ಸಮಾಲೋಚನೆ

Bommai
Published on

ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿನೇದಿನೆ ಆತಂಕ ಹೆಚ್ಚಿಸುತ್ತಿದೆ. ಮುಂದಿನ ಚುನಾವಣೆಗೆ ಬೊಮ್ಮಾಯಿ ಅವರದೇ ನಾಯಕತ್ವ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಣೆ ಮಾಡಿದ್ದರು. ಆನಂತರ ದೆಹಲಿಯ ಮಾಧ್ಯಮವೊಂದರ ಸಮಾರಂಭದಲ್ಲಿ ಸ್ವತಃ ಬೊಮ್ಮಾಯಿ ಸಹ ನನ್ನದೇ ನಾಯಕತ್ವ ಎಂಬ ಮಾತು ಹೇಳಿಕೊಂಡಿದ್ದರು. ನಾಯಕತ್ವ ಮುಂದುವರಿಯಲು ಎರಡೂ ಕ್ಷೇತ್ರ ಗೆಲ್ಲುವ ಅನಿವಾರ್ಯತೆ ಇದೆ.

ಉಪಸಮರ ಗೆದ್ದರೆ ಮಾತ್ರ ಮುಂದಿನ ನಾಯಕತ್ವ ಗಟ್ಟಿಯಾಗಲಿದೆ. ಇಲ್ಲದಿದ್ದರೆ ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಪರ್ಯಾಯ ಆಲೋಚನೆ ಮಾಡಲಿದ್ದಾರೆ ಎಂಬ ಸಂದೇಶ ಬೊಮ್ಮಾಯಿ ಅವರಿಗೆ ತಲುಪಿದೆ. ತಾವೆಣಿಸಿದಂತೆ ಎರಡೂ ಕಡೆ ಸುಲಭವಾಗಿ ಗೆಲ್ಲುವ ಪರಿಸ್ಥಿತಿ ಇಲ್ಲ ಎಂಬುದು ಅಲ್ಲಿಂದ ಬಂದಿರುವ ವರದಿ ಸಿಎಂ ತಲೆಬಿಸಿಯನ್ನು ಹೆಚ್ಚಿಸಿದೆ.

ಬಿಜೆಪಿಯ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿ ಪ್ರತ್ಯೇಕವಾಗಿ ಎರಡು ಕ್ಷೇತ್ರದ ವರದಿ ಪಡೆದಿದ್ದಾರೆ. ಆ ವರದಿ ತಲುಪಿದ ಬಳಿಕ, ಎರಡು ದಿನಗಳ ಹಿಂದೆ ಬೊಮ್ಮಾಯಿ ತಮ್ಮ ಕೆಲವೇ ಕೆಲವು ಆಪ್ತರು ಹಾಗೂ ಒಂದಿಬ್ಬರು ಹಿರಿಯ ಸಚಿವರ ಜತೆ ಚುನಾವಣೆ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಚುನಾವಣೆ ಕಣದಲ್ಲಿ ರೂಪಿಸಬೇಕಾದ ತಂತ್ರ, ಪ್ರತಿತಂತ್ರ, ಸಂಪನ್ಮೂಲ, ಜೆಡಿಎಸ್ ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚೆಚ್ಚು ಗಳಿಸುವಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರ್ಚಚಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳು ವಿಭಜನೆಯಾದಷ್ಟು ಅದರ ಲಾಭ ಬಿಜೆಪಿಗೆ ಆಗುತ್ತದೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಜತೆಜತೆಗೆ ಆ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಆಪ್ತರೊಂದಿಗಿನ ಸಮಾಲೋಚನೆ ನಂತರವೇ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆಗೆ ಸಮಾಲೋಚನೆ ನಡೆಸಿದ್ದು ಹಾಗೂ ಅವರನ್ನು ಪ್ರಚಾರಕ್ಕೆ ಆಹ್ವಾನಿಸಿದ್ದು. ಯಡಿಯೂರಪ್ಪ ಅವರು ಆಸಕ್ತಿಯೊಂದಿಗೆ ಪ್ರಚಾರ ಮಾಡದಿದ್ದರೆ ಗೆಲುವು ಕಷ್ಟವಾಗಲಿದೆ. ಅದರ ಪರಿಣಾಮ ಮುಂದಿನ ಚುನಾವಣೆ ನಾಯಕತ್ವದ ಮೇಲೆ ಬೀರಲಿದೆ ಎಂದು ಆಪ್ತರು ಬೊಮ್ಮಾಯಿಗೆ ಎಚ್ಚರಿಸಿದ್ದರೆಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ. ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ಹೇಗೆ ಕ್ರೋಡೀಕರಿಸಬೇಕು, ಅದರ ಜವಾಬ್ದಾರಿ ಯಾರು ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ.

ಬೊಮ್ಮಾಯಿ ರಂಗಪ್ರವೇಶ ಇಂದು

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದ ಸುಳಿಯಲ್ಲಿದೆ. ಜತೆಗೆ ನಾಯಕತ್ವದ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದ ಅನಿವಾರ್ಯತೆ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಪ್ರಚಾರದ ರಂಗ ಪ್ರವೇಶಿಸಲಿದ್ದಾರೆ.

ಬೆಂಗಳೂರಿನಿಂದ ಬೆಳಗ್ಗೆ ಹೊರಟು ಹಾನಗಲ್ ಕ್ಷೇತ್ರದಲ್ಲಿ ಇಡೀ ದಿನ ಸುತ್ತಾಡಿ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಮತಬೇಟೆಯಾಡಲಿದ್ದಾರೆ. ಹಾನಗಲ್ ಸಿಎಂ ತವರು ಜಿಲ್ಲೆ ಹಾವೇರಿ ವ್ಯಾಪ್ತಿಯಲ್ಲಿದೆ. ಹೀಗಾಗಿ ಬೊಮ್ಮಾಯಿ ಪಾಲಿಗೆ ಪ್ರತಿಷ್ಠೆಯ ಅಖಾಡವೆಂದು ಬಿಂಬಿತವಾಗಿದೆ. ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಉದಾಸಿ ಕುಟುಂಬದ ಹೊರಗಿನವರು ಅಭ್ಯರ್ಥಿಯಾಗಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಸೇರಿ ಪಕ್ಷದ ಹಿರಿಯ ನಾಯಕರನ್ನು ಜತೆಗೆ ಕೊಂಡೊಯ್ದು ಪಕ್ಷದ ಉಮೇದುವಾರರನ್ನು ಗೆಲುವಿನ ದಡ ಸೇರಿಸುವುದು ಸವಾಲಾಗಿದೆ. ಅಧಿಕೃತ ಉಮೇದುವಾರನ ಹೆಸರು ಪ್ರಕಟಿಸಿದ ನಂತರ ಅಸಮಾಧಾನ ತಲೆದೋರಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಬೊಮ್ಮಾಯಿ, ರಾತೋರಾತ್ರಿ ಕಸರತ್ತು ನಡೆಸಿ ಬಗೆಹರಿಸಿದ್ದಾರೆ.

ಹಾನಗಲ್ ಪ್ರಚಾರ ಕಾರ್ಯ ಮುಗಿಸಿ ಸಿಎಂ ಬೆಂಗಳೂರಿಗೆ ಮರಳಲಿದ್ದಾರೆ. ಕೆಲ ದಿನಗಳ ಬಳಿಕ ಸಿಂದಗಿಯಲ್ಲಿ ಪ್ರವಾಸ ಮಾಡಲಿದ್ದು, ಎರಡು ಕ್ಷೇತ್ರಗಳಲ್ಲಿ ಒಟ್ಟು ನಾಲ್ಕು ದಿನ ಪ್ರಚಾರದ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರಿಗೆ ಟಾಸ್ಕ್: ವರಿಷ್ಠರ ಸೂಚನೆ, ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ತೀರ್ವನದಂತೆ ರಣತಂತ್ರ ರೂಪಿಸಿದ್ದು, ಪ್ರತಿಯೊಬ್ಬ ಸಚಿವರಿಗೂ ಸಿಎಂ ಟಾಸ್ಕ್ ನಿಗದಿಪಡಿಸಿದ್ದಾರೆ. ಅಧಿಕಾರದ ಬಲ, ಸರ್ಕಾರದ ವರ್ಚಸ್ಸು ಮತ್ತು ದೃಢ ಸಂಘಟನೆ ಆಧಾರವಾಗಿದ್ದರೂ ಜಾತಿವಾರು ಲೆಕ್ಕಾಚಾರದಲ್ಲಿ ಕಾಯರ್åತಂತ್ರ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಳಿಯದ ಸಚಿವರು!

ಜಿಪಂ ಕ್ಷೇತ್ರಕ್ಕೊಬ್ಬ ಸಚಿವ, ಕ್ಷೇತ್ರಕ್ಕೆ ಪ್ರಮುಖ ಸಚಿವರನ್ನು ಜೋಡಿಸಿದ್ದರೂ ಬಹುತೇಕ ಸಚಿವರು ಹಾನಗಲ್ ಹಾಗೂ ಸಿಂದಗಿಯತ್ತ ಸುಳಿದಿಲ್ಲ ಎಂದು ಮುಖಂಡರು ದೂರಿದ್ದಾರೆ. ಕಾಟಾಚಾರಕ್ಕೆ ಕೆಲವು ಸಚಿವರು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ಮರಳಿದ್ದಾರೆ. ಬಹಿರಂಗ ಪ್ರಚಾರ ಮುಗಿಯುವ ತನಕ ಆಯಾ ಕ್ಷೇತ್ರದಲ್ಲಿ ಬಿಡಾರ ಹೂಡಬೇಕೆಂಬ ಸೂಚನೆ ಪಾಲನೆಯಾಗಿಲ್ಲ. ಇಷ್ಟು ದಿನ ದಸರಾ ಹಬ್ಬ, ಪ್ರಚಾರದ ಅವಧಿ ಸಾಕಷ್ಟಿದೆ ಎಂದು ಸಬೂಬು ನೀಡಲಾಗಿತ್ತು. ಈಗಲಾದರೂ ಸಕ್ರಿಯವಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಿಂದಗಿ, ಹಾನಗಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವು ಜಾತಿಯಲ್ಲ, ನೀತಿ ಆಧಾರದ ಮೇಲೆ ರಾಜಕೀಯ ಮಾಡುತ್ತೇವೆ. ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದು, ಯಾರಿಗೆ ಮತ ಹಾಕಿದರೆ ಒಳ್ಳೆಯದು ಎಂಬುದು ಅವರಿಗೆ ಗೊತ್ತಿದೆ. | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಅಖಾಡಕ್ಕೆ ಬಿಎಸ್​ವೈ, ಅಭ್ಯರ್ಥಿಗಳಿಗೂ ಬಲ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಪ ಚುನಾವಣೆ ಈ ಮಾತುಕತೆಯ ಮುಖ್ಯ ಕಾರ್ಯಸೂಚಿಯಾಗಿದೆ. ವಸ್ತುಸ್ಥಿತಿ ಮಾಹಿತಿ ಪಡೆದ ಬಿಎಸ್​ವೈ ಪ್ರಚಾರದ ಅಖಾಡಕ್ಕೆ ಇಳಿಯಲು ಸನ್ನದ್ಧರಾಗಿದ್ದು, ಮೊದಲ ಹಂತದಲ್ಲಿ ಅ.20ರಿಂದ ನಾಲ್ಕು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಇದು ಎರಡೂ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಲ ತುಂಬಲಿದೆ. ರಾಜಕೀಯ ಅಂಗಳದಲ್ಲಿ ನಡೆಯುತ್ತಿರುವ ಅಂತೆ-ಕಂತೆಗಳಿಗೆ ತೆರೆಬೀಳಲಿದೆ ಎಂಬುದು ಪಕ್ಷದ ಮುಖಂಡರ ವಿಶ್ವಾಸ.

ನವದೆಹಲಿಗೆ ಮುಖ್ಯಮಂತ್ರಿ

ಬಸವರಾಜ ಬೊಮ್ಮಾಯಿ ಅವರು ಅ.21ಕ್ಕೆ ನವದೆಹಲಿಗೆ ತೆರಳಲಿದ್ದಾರೆ. ಅರಣ್ಯ ಇಲಾಖೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಜತೆ ಚರ್ಚೆ ನಡೆಸುವ ಸಲುವಾಗಿ ಒಂದು ದಿನದ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬಡವರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ ಕೊಡಲಾಗುವುದು. ನಾವು ಕೊಡುತ್ತಿದ್ದ 7 ಕೆ.ಜಿ. ಅಕ್ಕಿಯನ್ನು ಯಡಿಯೂರಪ್ಪ ಸಿಎಂ ಆದ ಮೇಲೆ 5 ಕೆ.ಜಿ.ಗೆ ಇಳಿಸಿದರು. ಬಸವರಾಜ ಬೊಮ್ಮಾಯಿ ಕೂಡ ಇದನ್ನೇ ಮುಂದುವರಿಸಿದ್ದಾರೆ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net