112 ಪೊಲೀಸರ ಎದುರಲ್ಲೇ ಹಲ್ಲೆ, ಸುಲಿಗೆ !

Published on

ಹಾನಗಲ್ಲ: ಇಲ್ಲಿನ ಬಸ್ ನಿಲ್ದಾಣದ ಬಳಿ ದರ್ಗಾ ಕ್ರಾಸ್‌ನಲ್ಲಿ 112 ಪೊಲೀಸ್ ಸಿಬ್ಬಂದಿ ಎದುರಲ್ಲೇ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ, ಆತನ ಬಳಿ ಇದ್ದ 15,000 ರೂ. ನಗದು ಹಾಗೂ ಬೈಕ್ ಕೀ ಸುಲಿಗೆ ಮಾಡಿರುವ ಕುರಿತು ವರದಿಯಾಗಿದೆ.
ಹಾನಗಲ್ಲನ ಸಮೀರ್ ಅಹ್ಮದ್ ನಿಸಾರ್ ಅಹ್ಮದ್ ಮುಲ್ಲಾ ಹಲ್ಲೆಗೀಡಾದವ. ಮಂಜುನಾಥ ಯಳ್ಳೂರ ಹಲ್ಲೆ ನಡೆಸಿದ ಆರೋಪಿ.
ಜೂ.30ರಂದು ರಾತ್ರಿ 11 ಗಂಟೆ ಸುಮಾರು ದರ್ಗಾ ಕ್ರಾಸ್ ಬಳಿ ಪೋಲ್ಸ್ ತುಂಬಿಕೊಂಡು ನಿಂತಿದ್ದ ವಾಹನವನ್ನು 112 ಪೊಲೀಸ್ ಗಸ್ತು ವಾಹನದ ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮಂಜುನಾಥ ಯಳ್ಳೂರ ಹಾಗೂ ಮತ್ತೋರ್ವ ಪೊಲೀಸರ ಎದುರಲ್ಲೇ ಸಮೀರ್ ಅಹ್ಮದ್‌ನನ್ನು ಅಡ್ಡಗಟ್ಟಿ ಜಗಳ ತೆಗೆದರು. ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಸುಕಿ, ಹಲ್ಲೆ ನಡೆಸಿದರು. ನಂತರ ಬಲವಂತವಾಗಿ ಆತನ ಬಳಿ ಇದ್ದ 15,000 ರೂ. ಹಾಗೂ ಬೈಕ್ ಕೀ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಬಂಧನ :
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ ಯಳ್ಳೂರನನ್ನು ಬಂಧಿಸಿ, ಈತನಿಂದ 1,100 ರೂ. ನಗದು, ಬೈಕ್ ಕೀ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಾಣಗಲ್ಲ ಸಿಪಿಐ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net