

ರಾಮನಗರ: ಸುಲಿಗೆ ಮಾಡಲು ಚಾಕು, ಚೂರಿ, ಮಾರಕಾಸ್ತ್ರಗಳನ್ನು ಬಳಕೆ ಮಾಡುವುದು ಸಾಮಾನ್ಯ. ಆದರೆ ಪಾರಿವಾಳ ಹಣ ಕೀಳುವ ಸಾಧನವಾದರೆ? ಅಚ್ಚರಿ ಆಗದೇ ಇರದು. ಹೌದು, ಪಾರಿವಾಳವನ್ನು ಮುಂದಿಟ್ಟು ಕೊಂಡು ಶ್ರೀಮಂತರ ಮನೆ ಮಕ್ಕಳನ್ನು ಬೆದರಿಸಿ ಹಣ ಕೀಳುತ್ತಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಅತಿಥಿಯಾಗಿದೆ.
ಶಾಲೆಗೆ ಹೋಗುವ ಮಕ್ಕಳಿಗೆ ಪಾರಿವಾಳ ಎಂದರೆ ಎಲ್ಲಿಲ್ಲದ ಆಸೆ. ಇದನ್ನು ಮನಗಂಡಿದ್ದ ಇಬ್ಬರು ಖದೀಮರು ರಾಮನಗರ ಪ್ರತಿಷ್ಠಿತ ಶಾಲೆಯೊಂದರ ಬಾಲಕರಿಗೆ ಪಾರಿವಾಳಗಳನ್ನು ಮೊದಲು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಕಡಿಮೆ ಬೆಲೆಗೆ ಪಾರಿವಾಳ ದೊರೆತ ಖುಷಿಯಲ್ಲಿ ಮಕ್ಕಳು ಅದನ್ನು ಸಾಕಲು ಮನೆಗೂ ತೆಗೆದುಕೊಂಡು ಹೋಗುತ್ತಿದ್ದರು. ಹಾರಲು ಬಿಟ್ಟ ತಕ್ಷಣವೇ ಪಾರಿವಾಳ ಸಂಜೆ ವೇಳೆಗೆ ಮೂಲ ಮಾಲೀಕರ ಬಳಿಗೆ ಬಂದು ಸೇರುತ್ತಿದ್ದವು. ಆದರೆ, ಇದರ ಬಗ್ಗೆ ಕೊಂಚವೂ ಅರಿವಿಲ್ಲದ ಚಿಕ್ಕ ಮಕ್ಕಳು ಪಾರಿವಾಳ ಹೊರಟು ಹೋದ ದುಃಖದಲ್ಲಿರುತ್ತಿದ್ದರು.
ಮತ್ತೊಂದೆಡೆ ಮರುದಿನ ಮಕ್ಕಳ ಎದುರು ಕಾಣಿಸಿಕೊಳ್ಳುತ್ತಿದ್ದ ಈ ಗ್ಯಾಂಗ್, ನಮಗೆ ಪಾರಿವಾಳ ವಾಪಸ್ ಕೊಡಿ ಎನ್ನುವ ಬೇಡಿಕೆ ಮುಂದಿಡುತ್ತಿದ್ದರು. ಮಕ್ಕಳು ಪಾರಿವಾಳ ಇಲ್ಲ ಎನ್ನುತ್ತಿದ್ದಂತೆ ಅಸಲಿ ಆಟ ಶುರುವಿಡುತ್ತಿದ್ದ ಈ ಗ್ಯಾಂಗ್, ಪಾರಿವಾಳ ಕೊಡಿ ಇಲ್ಲವೇ ಹಣ ಕೊಡಿ, ಕೊಡಲಿಲ್ಲ ಎಂದರೆ ಮನೆಗೆ ಹೇಳುವ ಬೆದರಿಕೆ ಹಾಕುತ್ತಿದ್ದರು.
ಸಿಕ್ಕಿ ಬಿದ್ದರು: ಪಾರಿವಾಳದ ಯೋಜನೆಯನ್ನು ರಾಮನಗರ ಶ್ರೀಮಂತ ವ್ಯಕ್ತಿಯೊಬ್ಬರ ಮಗನ ಮೇಲೆ ಪ್ರಯೋಗ ಮಾಡಿದ್ದು, ಕಳೆದ ಮೂರು ದಿನಗಳ ಹಿಂದೆ ಆತನಿಗೆ 50 ಸಾವಿರ ರೂ. ಕೊಡಬೇಕು, ಇಲ್ಲವಾದರೆ ಈ ವಿಚಾರವನ್ನು ಮನೆಯಲ್ಲಿ ಹೇಳುತ್ತೇನೆ ಎನ್ನುವ ಬೆದರಿಕೆ ಹಾಕಿದ್ದಾರೆ. ಬಾಲಕ ಹಣ ಕೊಡಲು ನಿರಾಕರಿಸಿದಾಗ ಆತನ ಮನೆವರೆಗೂ ಹೋಗಿ ಪೀಡಿಸಿದ್ದಾರೆ. ಇದನ್ನು ಗಮನಿಸಿದ ಪಾಲಕರು ವಿಚಾರಣೆ ನಡೆಸಿದಾಗ ಪಾರಿವಾಳದಿಂದ ಮೋಸ ಹೋಗಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ನಂತರ ಪಾಲಕರು ಇಬ್ಬರಿಗೂ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡು ಬಲೆಗೆ ಕೆಡವಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರ ವಿಚಾರಣೆಗೆ ಬೆದರಿದ ಖತರ್ನಾಕ್‌ಗಳು ಅಸಲಿಯತ್ತನ್ನು ಬಾಯಿ ಬಿಟ್ಟಿದ್ದಾರೆ.
ಎಚ್ಚರ ವಹಿಸಬೇಕಿದೆ: ಮಕ್ಕಳು ಸಾಮಾನ್ಯವಾಗಿ ಪಾರಿವಾಳ, ನಾಯಿ, ಬೆಕ್ಕುಗಳಂತ ಪ್ರಾಣಿ ಪಕ್ಷಿಗಳ ಬಗ್ಗೆ ಒಲವು ಹೊಂದುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ವಂಚಕರಿಗೆ ಇದೇ ಬಂಡವಾಳವಾಗುತ್ತಿರುವುದು ಆತಂಕದ ವಿಚಾರ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಾಲೆಗಳ ಆಡಳಿತ ವರ್ಗ ಮನೆ ಮತ್ತು ಶಾಲೆಯ ಸುತ್ತಮುತ್ತ ಮಕ್ಕಳೊಂದಿಗೆ ಅನುಮಾನಾಸ್ಪದವಾಗಿ ವರ್ತಿಸುವವರ ಬಗ್ಗೆ ಗಮನಹರಿಸುವುದು ಸೂಕ್ತ. ಇದರ ಜತೆಗೆ ಮಕ್ಕಳ ಚಟುವಟಿಕೆ ಬಗ್ಗೆ ಕಾಳಜಿ ವಹಿಸಬೇಕಿದೆ. ಇಲ್ಲವಾದರೆ ಬೇರೊಬ್ಬರ ಹಣದ ದಾಹಕ್ಕೆ ಮಕ್ಕಳು ಅಡ್ಡದಾರಿ ಹಿಡಿಯುವುದು ನಿಶ್ಚಿತ.
1000 ರೂ.ವರೆಗೆ ವಸೂಲಿ: ಮನೆಯಲ್ಲಿ ಪಾಲಕರಿಗೆ ವಿಚಾರ ಗೊತ್ತಾದರೆ ಸಮಸ್ಯೆಯಾಗುತ್ತದೆ ಎನ್ನುವ ಆತಂಕದಲ್ಲಿಯೇ ಮನೆಯಲ್ಲಿ ಕದ್ದೋ, ಇಲ್ಲ ಇನ್ನಾವುದೋ ರೂಪದಲ್ಲಿ ಮಕ್ಕಳು 100 ರೂ.ನಿಂದ ಸಾವಿರ ರೂ.ವರೆಗೆ ತಂದುಕೊಟ್ಟಿದ್ದಾರೆ. ಕಳೆದ 6 ತಿಂಗಳಿಂದ ನಾಲ್ಕೈದು ಮಕ್ಕಳು ಪಾರಿವಾಳದ ಆಸೆಗೆ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಮಕ್ಕಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಈ ರೀತಿ ಬೇರೆ ಕಡೆಗಳಲ್ಲಿ ಬೆದರಿಸಿ ಹಣ ವಸೂಲಿ ಮಾಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಡಾ. ಅನೂಪ್ ಎ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ಪಾರಿವಾಳ ನೀಡಿ ಹಣ ಪೀಕುವ ದಂಧೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಎಲ್ಲ ಶಾಲೆಗಳ ಬಳಿ ಗಮನ ಹರಿಸಬೇಕು. ಶಾಲಾ ಆಡಳಿತ ಮಂಡಳಿಯೂ ಹೆಚ್ಚು ಕಾಳಜಿ ವಹಿಸಬೇಕಿದೆ. ಗಾಂಜಾ ಮಾರಾಟವೂ ಹೆಚ್ಚುತ್ತಿದ್ದು, ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಬೇಕಿದೆ. ನಾಗರಾಜು, ರಾಮನಗರ ನಿವಾಸಿ