

ಹೊಸಪೇಟೆ: ಕರೊನಾ ಲಾಕ್‌ಡೌನ್ ಸಡಿಲಗೊಳಿಸಿ ದೇವಸ್ಥಾನಗಳ ತೆರೆಯಲು ಅವಕಾಶ ನೀಡಿದ್ದರಿಂದ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಮೊದಲ ದಿನವಾದ ಸೋಮವಾರ ನೂರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ಕರೊನಾ ನಿಯಂತ್ರಿಸಲು ಮುಜರಾಯಿ ಇಲಾಖೆಯ ಅಧೀನದ ದೇಗುಲಗಳಿಗೆ ಮಾರ್ಚ್ ಕೊನೇ ವಾರದಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಭಕ್ತರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳು ಹಾಗೂ ತೀರ್ಥ ಪ್ರಸಾದಕ್ಕೆ ಅವಕಾಶ ನೀಡಿರಲಿಲ್ಲ. ಭಕ್ತರು ಕರೊನಾ ಮಾರ್ಗಸೂಚಿ ಅನ್ವಯ ಪರಸ್ಪರ ಅಂತರ, ಮಾಸ್ಕ್ ಧರಿಸಿ ದರ್ಶನ ಮಾಡಿದರು.
ಬೆಳಗ್ಗೆ 6 ಗಂಟೆಯಿಂದಲೇ ಹಂಪಿಗೆ ಬರಲಾರಂಭಿಸಿದ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಮನೆಯಿಂದ ತಂದಿದ್ದ ಉಪಾಹಾರವನ್ನು ಮಂಟಪದ ಬಳಿ ಕುಟುಂಬ ಸಮೇತರಾಗಿ ಕುಳಿತು ಸವಿದರು.
ಜಿಲ್ಲೆಯ ಕುರುವತ್ತಿ ಬಸವೇಶ್ವರ, ಮೈಲಾರ ಸೇರಿ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಬೆಳಗ್ಗೆ 6.50ರಿಂದ ಸಂಜೆ 8ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.