ಸ್ತ್ರೀತನ ಇಲ್ಲದಿದ್ದರೆ ಒಳ್ಳೆಯ ಲೇಖಕನಾಗಲ್ಲ - ಕುಂ.ವೀರಭದ್ರಪ್ಪ

Hampi Utsav Women's Poetry Gathering
ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಶುಕ್ರವಾರ ಮಹಿಳಾ ಕವಿಗೋಷ್ಠಿಯನ್ನು ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸಿದರು. ಡಿಸಿ ಎಂ.ಎಸ್.ದಿವಾಕರ್, ಡಿಡಿಪಿಐ ವೆಂಕಟೇಶ ಇದ್ದರು.
Published on

ವಿ.ಕೆ. ರವೀಂದ್ರ ಹಂಪಿ (ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ)

ಹಂಪಿ ಉತ್ಸವ ಅಂಗವಾಗಿ ಮೊದಲದಿನ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಕವಿಗೋಷ್ಠಿಯಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು. ಒಬ್ಬೊಬ್ಬರು ಭಿನ್ನ ಕವನಗಳನ್ನು ರಚಿಸಿ ಗಮನ ಸೆಳೆದರು. ಮಹಿಳಾ ಸಂವೇದನೆ, ಪ್ರಕೃತಿ, ನಾಡು-ನುಡಿ, ಸಂಸ್ಕೃತಿ, ತಾಯ್ತನ, ಆಧುನಿಕತೆ ಮೇಲೆ ಬೆಳಕು ಚೆಲ್ಲುವ ಕವಿತೆ ವಾಚಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಬಹುತೇಕ ಕವನಗಳಲ್ಲಿ ಮಹಿಳಾ ಶಕ್ತಿ ಅನಾವರಣಗೊಂಡಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಅವರು ಗೋಷ್ಠಿ ಉದ್ಘಾಟನೆ ನೆರವೇರಿಸಿದರು. ಎಲ್ಲ ವಿಧದ ಮೂಢನಂಬಿಕೆ ತುಳಿವ ಶಕ್ತಿ ನಮ್ಮ ಕಾವ್ಯಕ್ಕಿದೆ. ಮಹಿಳಾ ಕಾವ್ಯದ ತೊಟ್ಟಿಲಿದ್ದಂತೆ. ಅವರನ್ನು ಗೌರವದಿಂದ ಕಾಣಬೇಕಿದೆ. ಮಹಿಳಾ ಕವಿಗೋಷ್ಠಿ ಉದ್ಘಾಟಿಸಿದ್ದು ಖುಷಿ ನೀಡಿದೆ. ‘ಕಲ್ಲು ಕೊಟ್ಟವರಿಗೂ ಎಲ್ಲ ಭಾಗ್ಯ ಬರಲಿ’ ಎಂದು ನಮ್ಮ ಮಹಿಳೆಯರು ಹರಸಿದ್ದಾರೆ.

ಇದು ನಮ್ಮ ನಾಡಿನ ಹೆಣ್ಣು ಮಕ್ಕಳ ಉದಾತ್ತ ಚಿಂತನೆಗೆ ಉದಾಹರಣೆ. ವರ್ತಮಾನದ ಕಾವ್ಯ ಹಾಗೂ ಚಿಂತನೆಗಳಲ್ಲಿ ಕಡು ಬಡುತನದ ಬಗ್ಗೆ ಯಾರು ಬರೆಯುತ್ತಿಲ್ಲ. ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಭಾಷೆ ಜೀವಂತವಾಗಿ ಇರಬೇಕಾದರೆ ಮಕ್ಕಳಿಗೆ ಕನ್ನಡ ಮಾತನಾಡುವ ವಾತಾವರಣ ಶಾಲೆಗಳಲ್ಲಿ ಸೃಷ್ಟಿಯಾಗಬೇಕು ಎಂದರು.

ಹೆಣ್ಣು ಇಲ್ಲದ ಕುಟುಂಬ ಅಪರಿಪೂರ್ಣ. ಹೆಣ್ಣಿಗಿಂತ ದೊಡ್ಡದು ಯಾವುದೂ ಇಲ್ಲ. ಕುಟುಂಬದಲ್ಲಿ ಹೆಣ್ಣೇ ಕಣ್ಣು. ಹೆಣ್ಣುಮಕ್ಕಳು ಇದ್ದರೆ ತಂದೆ-ತಾಯಿಯ ಅನಾಥಾಶ್ರಮಕ್ಕೆ ಸೇರಿಸುವುದಿಲ್ಲ. ಹೆಣ್ಣಿನದು ತಾಯಿ ಹೃದಯ. ಸ್ವಾತಂತ್ರ್ಯ ಪೂರ್ವದಲ್ಲಿ ಒಲ್ಲದ ಗಂಡನ ಜೊತೆಗೆ ಜೀವನ ಮಾಡಿದ ಮಹಿಳೆ, ಗಂಡ ಕೆಟ್ಟವನಾಗಿರಲಿ, ಕುಡುಕನಾಗಿರಲಿ ಎಲ್ಲವನ್ನೂ ಸಹಿಸಿಕೊಂಡು ಅವನೊಂದಿಗೆ ಕುಟುಂಬ ಮುನ್ನಡೆಸಿದಳು.

ತಾಳ್ಮೆ, ಸಹನೆ ಎಂದರೆ ಹೆಣ್ಣು. ಮಹಿಳಾ ಕವಿಗೋಷ್ಠಿಯಲ್ಲಿ 42 ಕವಿಯತ್ರಿಯರ ಕವನ ಕೇಳಲು ಸಂತಸ ಎನಿಸುತ್ತಿದೆ. ನನ್ನ ಸಾಹಿತ್ಯ, ಚಿಂತನೆ ಹಾಗೂ ಭಾಷೆಯ ಸೃಷ್ಟಿಗೆ ಬಳ್ಳಾರಿ ನೆಲ ಕಾರಣ. ನನ್ನ ಕಥೆ, ಕಾದಂಬರಿಗಳಲ್ಲಿ ಮಹಿಳಾ ಧ್ವನಿಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿದ್ದೆನೆ. ಸ್ತ್ರೀತನ ಇಲ್ಲದಿದ್ದರೆ ಒಳ್ಳೆಯ ಲೇಖಕನಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಡಿಸಿ ಎಂ.ಎಸ್.ದಿವಾಕರ, ಅಂಕಣ ಬರಹಗಾರ್ತಿ ಶ್ರೀದೇವಿ ಕೆರೆಮನೆ, ಖ್ಯಾತ ಸಾಹಿತಿಗಳಾದ ಡಾ.ನಿಷ್ಠಿ ರುದ್ರಪ್ಪ, ಡಾ.ಗುಂಡಿ ಮಾರುತಿ, ಡಾ.ದಯಾನಂದ ಕಿನ್ನಾಳ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಪ್ರಾಚಾರ್ಯ ನಾಗರಾಜ್ ಹವಾಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಶ್ವೇತಾ, ಸಿಂಧು, ಸುಭದ್ರಾ ಇತರರಿದ್ದರು.

ನೋಡುವ ದೃಷ್ಟಿಕೋನ ಬದಲಿಸಿ

ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ವಿಮರ್ಶಕಿ ಡಾ. ಸೋಮಕ್ಕ ಎಂ., ಶತ- ಶತಮಾನಗಳಿಂದ ಮಹಿಳೆಯರು ಅವಕಾಶ ವಂಚಿತರಾಗಿದ್ದರು. ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗಳಿಂದ ಮಹಿಳೆಯರ ಪರವಾದ ನೀತಿ, ನಿಯಮಗಳು ಇಂದು ಜಾರಿಯಾಗಿವೆ. ನಮ್ಮ ಎಲ್ಲ ವಿಚಾರ ಅಭಿವ್ಯಕ್ತಪಡಿಸುವ ಅವಕಾಶ ಸಿಕ್ಕಿದೆ.

ಶಿವರಾತ್ರಿ ದಿನ ಜನರು ಸಾಲುಸಾಲಾಗಿ ದೇವಾಲಯಗಳ ಮುಂದೆ ನಿಲ್ಲುವ ಬದಲು ಗ್ರಂಥಾಲಯದ ಮುಂದೆ ನಿಂತರೆ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ. ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಹೆಣ್ಣಿನ ಶೋಷಣೆ, ದೌರ್ಜನ್ಯ ಮುಂದುವರಿದಿದೆ. ಇದರ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕಿದೆ.

ಹೆಣ್ಣು- ಗಂಡು ಚಹರೆ ಮೂಲಕ ಗುರುತಿಸಬಹುದು. ಆದರೆ, ಮಾನಸಿಕವಾಗಿ ಅಲ್ಲ. ವಿದೇಶದಲ್ಲಿ ಮಹಿಳೆಯರು ತುಂಡು ಬಟ್ಟೆ ತೊಟ್ಟರೂ ಅವರ ಮೇಲೆ ದೌರ್ಜನ್ಯ ನಡೆಯುವುದಿಲ್ಲ. ನಮ್ಮ ದೇಶದಲ್ಲಿ ಮೈ ತುಂಬಾ ಬಟ್ಟೆ ಉಟ್ಟರೂ ದೌರ್ಜನ್ಯ ನಡೆಯುತ್ತದೆ. ಸಮಾಜ ಅವಳನ್ನು ನೋಡುವ ದೃಷ್ಟಿ ಬದಲಾಗಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net