ಹಂಪಿ ಉತ್ಸವಕ್ಕೆ ಬರಲಿದ್ದಾರೆ ಸ್ಟಾರ್ಗಳು

21 MANJU 01
Published on

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿಯ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ತಾರಾ ಮೆರಗು ಹೆಚ್ಚಿಸಲು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ, ರಮೇಶ್ ಅರವಿಂದ್ ಸೇರಿದಂತೆ ಹಾಗೂ ಹಾಸ್ಯ ನಟರು ಕೂಡ ಭಾಗಿಯಾಗಲಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚಿನ ಕೆಲವು ವರ್ಷಗಳಿಂದ ಹಂಪಿ ಉತ್ಸವ ಆಚರಣೆ ಮಾಡುತ್ತಾ ಬಂದಿದ್ದು, ಈಗ ಉತ್ಸವಕ್ಕೆ ತಾರಾ ಮೆರಗು ಕೂಡ ಜೋರಾಗುತ್ತಿದೆ. ಕನ್ನಡದ ಟಾಪ್ ಹಿರೋಗಳು, ಹಾಸ್ಯ ನಟರು ಮತ್ತು ಹಾಡುಗಾರರು ಉತ್ಸವದ ಮೆರಗು ಹೆಚ್ಚಿಸಲಿದ್ದಾರೆ. ಇನ್ನು ಹಂಪಿ ಉತ್ಸವ ನೋಡುವುದಕ್ಕೆ ಲಕ್ಷಾಂತರ ಜನರು ಸೇರಲಿದ್ದಾರೆ. ಹಂಪಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈಗಾಗಲೇ ಹಂಪಿ ಉತ್ಸವಕ್ಕೆ ವೇದಿಕೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ವಿಜಯನಗರ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಈ ಉತ್ಸವ ನೋಡಲು ರಾಜ್ಯಾದ್ಯಂತ ಜನರು ಆಗಮಿಸಲಿದ್ದಾರೆ.

ಯಾರೇಲ್ಲ ಬರಲಿದ್ದಾರೆ

ಹಂಪಿ ಉತ್ಸವಕ್ಕೆ ಈ ಹಿಂದೆಯೂ ಹಲವಾರು ಬಾರಿ ಚಂದನವನದ ಪ್ರಮುಖ ತಾರೆಗಳು ಆಗಮಿಸಿ ಕಲಾಭಿಮಾನಿಗಳಿಗೆ ಸಾಂಸ್ಕೃತಿಕ ರಸದೌತಣ ಉಣ ಬಡಿಸಿದ್ದಾರೆ. ಕಳೆದ ಬಾರಿ ನಡೆದ ಉತ್ಸವದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ದರ್ಶನ್ ನೋಡಲು ಜನ ಸಾಗರವೇ ಹರಿದು ಬಂದಿತು. ಇನ್ನು ಫೆ.28, ಮಾ.01 ಮತ್ತು 2ರಂದು ನಡೆಯಲಿರೋ ಹಂಪಿ ಉತ್ಸವಕ್ಕೆ ಉತ್ಸವದಲ್ಲಿ ಪ್ರಮುಖ ಚಿತ್ರ ನಟ, ನಟಿಯರು ಸೇರಿ ಹೊಸಬರನ್ನು ಕೂಡ ಜಿಲ್ಲಾಡಳಿತ ಆಹ್ವಾನಿಸಿದೆ. ರಿಯಲ್ ಸ್ಟಾರ್ ಉಪೇಂದ್ರ, ಅಶ್ವಿನಿ ಪುನೀತ್ ರಾಜಕುಮಾರ, ರಮೇಶ್ ಅರವಿಂದ್, ಚಿನ್ನಾರಿ ಮುತ್ತು ರಾಘವೇಂದ್ರ, ದಿಗಂತ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ಗುರುಕಿರಣ್, ಐಂದ್ರಿತಾ ರೈ, ಪ್ರೇಮಾ, ಪ್ರೀಯಾಂಕ ಉಪೇಂದ್ರ, ಪೂಜಾಗಾಂಧಿ, ಅನುಪ್ರಭಾಕರ್, ಶೃತಿ ಹರಿಹರನ್, ಭಾವನರಾವ್, ಶರಣ್ಯ ಶೆಟ್ಟಿ, ಅನುಶ್ರೀ ಹಾಗೂ ದಿವ್ಯ ಆಲೂರು, ರ‍್ಯಾಪರ್ ಬಿಚ್ಚು, ಬಾಳು ಬೆಳಗುಂದಿ, ವೈಷ್ಣವಿ ಗೌಡ, ಸೋನಾಲ್ ಮಂಟೆರಾವ್, ತರುಣ್ ಸುಧೀರ್ ಸೇರಿದಂತೆ ನಟ-ನಟಿಯರು ಹಾಗೂ ಆ್ಯಕಂರ್‌ಗಳು ಬರುತ್ತಿದ್ದಾರೆ.

Ramesh Aravind

ಆರೋಗ್ಯವಾಗಿದ್ದರೆ ಬರಲಿದ್ದಾರೆ ಶಿವಣ್ಣ

ಅನಾರೋಗ್ಯಕ್ಕೆ ಅಮೇರಿಕದಲ್ಲಿ ಚಿಕಿತ್ಸೆ ಪಡೆದು ಮರಳಿರುವ ನಟ ಹ್ಯಾಟ್ರೀಕ್ ಹೀರೋ ಶಿವರಾಜಕುಮಾರ್ ಅವರನ್ನು ಹಂಪಿ ಉತ್ಸವಕ್ಕೆ ಕರೆತರಲು ಜಿಲ್ಲಾಡಳಿತ ಆಹ್ವಾನಿಸಿದೆ. ಆರೋಗ್ಯದಲ್ಲಿ ಇನಷ್ಟು ಚೇತರಿಕೆ ಕಂಡರೆ, ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದು, ಹಂಪಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಉತ್ಸವಕ್ಕೆ ಬರಲಿ ಎಂಬ ಅಭಿಮಾನಿಗಳ ಆಶಯವಾಗಿದೆ.

ಹಂಪಿ ಉತ್ಸವಕ್ಕೆ ಭರದ ಸಿದ್ದತೆ ನಡೆದಿದೆ. ಉತ್ಸವದಲ್ಲಿ ಕಲಾವಿದರ ಆಯ್ಕೆ ಕೂಡ ಬಹುತೇಕ ಪೂರ್ಣಗೊಂಡಿದೆ. ಉಪೇಂದ್ರ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ ಸೇರಿದಂತೆ ಹಲವರ ಪಟ್ಟಿ ತಯಾರು ಆಗಿದೆ. ಶಿವರಾಜಕುಮಾರ ಅವರಿಗೂ ಆಹ್ವಾನಿಸಲಾಗಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net