

ಹರಿಕೃಷ್ಣ ಗಾನ ಸುಧೆಯಲ್ಲಿ ತೇಲಾಡಿದ ಸಂಗೀತ ಪ್ರಿಯರು
ಮಂಜುನಾಥ ಅಯ್ಯಸ್ವಾಮಿ
ಹಂಪಿ (ಗಾಯತ್ರಿ ಪೀಠ ವೇದಿಕೆ): ಹಂಪಿ ಉತ್ಸವ ನಿಮಿತ್ತ ಗಾಯತ್ರಿ ಪೀಠ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ತಂಡದವರ ಸಂಗೀತ ಕಾರ್ಯಕ್ರಮ ಶನಿವಾರ ರಾತ್ರಿ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.
ಎರಡನೇ ದಿನದ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ದರ್ಶನ ತೂಗುದೀಪ ಮಾತನಾಡಿದರು. ಅಲ್ಲಿಂದ ಸಂಭ್ರಮಿಸಿದ ಪ್ರೇಕ್ಷಕರಿಗೆ ಕೊಲ್ಕತದ ಗೋಲ್ಡನ್ ಗರ್ಲ್ಸ್ ತಂಡವು ಶಿವನ ಆರಾಧನೆ ನೃತ್ಯದಿಂದ ರಂಜಿಸಿದರು. ನಂತರ ಆಲ್‌ಓಕೆ ತಂಡ ಜನರನ್ನು ಸೆರೆಹಿಡಿಯಿತು. ಗಾಯಕರಾದ ಹೇಮಂತ್, ಸಂತು ವೆಂಕಿ, ಇಂದು ನಾಗರಾಜ್ ಅವರಿಂದ ‘ವಕ್ರತುಂಡ ಮಹಾಕಾಯ ಗಣಪತಿ’ ಹಾಡಿನೊಂದಿಗೆ ಮಧ್ಯರಾತ್ರಿ 12ರ ನಂತರ ಆರಂಭವಾದ ವಿ.ಹರಿಕೃಷ್ಣ ಅವರ ಟಪ್ಪಾಂಗುಚ್ಚಿ ಹಾಡುಗಳು ಯುವಕರ ಹಾರ್ಟ್ ಬೀಟ್ ಹೆಚ್ಚಿಸುವಂತೆ ರಂಜಿಸಿತು. ‘ತಿರುಗೊ ಭೂಮಿಗೆ’ ಹಾಡು ಕನ್ನಡಾಭಿಮಾನಿಗಳಿಗೆ ಹುರಿದುಂಬಿಸಿತು.
‘ಪಸಂದ್ ಆಗವ್ನೆ’ ಹಾಡಿಗೆ ಯುವಕ, ಯುವತಿಯರು ಕುಣಿದರು. ಡಾ.ಪುನೀತ್ ರಾಜಕುಮಾರ್ ನಟನೆಯ ಜಾಕಿ ಚಿತ್ರದ ‘ಎಕ್ಕ ರಾಜ ರಾಣಿ’ ಹಾಡು ಅಪ್ಪು ಅಭಿಮಾನಿಗಳನ್ನು ಹುಚ್ಚೆದು ಕುಣಿಯುವಂತೆ ಮಾಡಿತು. ದರ್ಶನ್ ನಟನೆಯ ‘ಯಜಮಾನ’ ಸಿನಿಮಾದ ‘ಬಸಂತಿ ಬಾ’ ಹಾಡಿಗೆ ಸಾದು ಕೋಕಿಲ ಸೇರಿದಂತೆ ಇತರರು ಧ್ವನಿ ಜೋಡಿಸಿದಾಗ ವೀಕ್ಷಕರು ಸಹ ನಿಂತಲ್ಲೇ ನೃತ್ಯ ಮಾಡಿದರು. ಗಾಯಕಿ ವಾಣಿ ಹರಿಕೃಷ್ಣ ಅವರಿಂದ ‘ನೀನೆ ಮೊದಲು’, ‘ಬೇರೆಯಾರೂ ಬೇಡ’ ಹಾಡಿಗೆ ಪ್ರೇಮಿಗಳನ್ನು ಲವ್ ಮೂಡಿಗೆ ಕರೆದೊಯ್ಯಿತು.
ಗಾಯಕರಾದ ಸಂತುವೆಂಕಿ, ಇಂದು ನಾಗರಾಜ್ ಅವರಿಂದ ‘ಯಾಕ ಹುಡುಗ ಮೈಯಾಗ ಹೆಂಗೈತಿ’, ಹರಿಕೃಷ್ಣ, ಹೆಮಂತ್ ಹಾಗೂ ಇಂದು ನಾಗರಾಜ್ ‘ಶೇಕ್ ಇಟ್ ಪುಷ್ಪವತಿ’, ‘ಬೊಂಬೆ ಹೇಳುತೈತೆ’ ಗೀತೆಯನ್ನು ಹಾಡಿ ರಂಜಿಸಿದರು.
ತಡರಾತ್ರಿ ಆರಂಭವಾದ ಹರಿಕೃಷ್ಣ ಅವರ ಸಂಗೀತ ಕಾರ್ಯಕ್ರಮವು ಯುವಕರಿಗೆ ಮದ ನೀಡಿತ್ತು. ಆದರೆ ಕೆಲ ಕಿಡಿಗೇಡಿಗಳು ಸ್ಪೀಕರ್‌ಗಳ ಮೇಲೆ ಹತ್ತಿ ಕುಣಿದರು. ಮೈಕ್ ಎತ್ತಿಕೊಂಡ ಸಾಧು ಕೋಕಿಲ ಅವರು ಯುವಕರನ್ನು ಕೆಳಗೆ ಇಳಿಯುವಂತೆ ಮನವಿ ಮಾಡಿದರು. ಬಳಿಕ ವಿ.ಹರಿಕೃಷ್ಣ ಕಾರ್ಯಕ್ರಮ ಮುಂದುವರಿಸಿದರು. ನಂತರ ಪೊಲೀಸ್ ಅಧಿಕಾರಿಗಳು ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಸೂಚನೆ ನೀಡಿದ್ದಕ್ಕೆ ಪುನೀತ್ ರಾಜಕುಮಾರ್ ನಟನೆಯ ‘ಬೊಂಬೆ ಹೇಳುತೈತೆ’ ಎಂಬ ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಇನ್ನಷ್ಟು ರಂಜಿಸಲು ವಿ.ಹರಿಕೃಷ್ಣ ತಂಡ ಉತ್ಸಾಹದಲ್ಲಿತ್ತು. ಆದರೆ ಪೊಲೀಸರ ಮಧ್ಯಸ್ಥಿಕೆಯಿಂದ ಕಾರ್ಯಕ್ರಮ ಸ್ಥಗಿತವಾದ ಕಾರಣ ಕಲಾಭಿಮಾನಿಗಳಿಗೆ ನಿರಾಸೆಯಾಯಿತು.
ಸಾವಿರಾರು ಸಂಖ್ಯೆಯಲ್ಲಿ ಜನರು ಹಂಪಿ ಉತ್ಸವ ನೋಡಿದರು. ಸಂಗೀತ ಕಾರ್ಯಕ್ರಮ ಮುಗಿದ ಬಳಿಕ ಜನಸಂದಣಿ ಹೆಚ್ಚಾಗಿತ್ತು. ಉಚಿತವಾಗಿ ಸಂಚರಿಸುತ್ತಿದ್ದ ಸಾರಿಗೆಯ ಎಂಟು ಬಸ್‌ಗಳು ತುಂಬಿದವು. ಬಸ್‌ಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಪರದಾಡಿದರು. ನಾಲ್ಕು ಕಿಮೀ ದೂರದ ಕಮಲಾಪುರವರೆಗೆ ಹಲವರು ನಡೆದುಕೊಂಡು ಹೋಗಿ, ಅಲ್ಲಿಂದ ತಮ್ಮ ಊರುಗಳಿಗೆ ತೆರಳಿದರು. ಇನ್ನೂ ಉದ್ದಾನ ವೀರಭದ್ರ ದೇವಸ್ಥಾನದ ಬಳಿ ಬಸ್ ಸೇರಿ ಇತರ ವಾಹನಗಳು ಕಿರಿದಾದ ದಾರಿಯಲ್ಲಿ ಸಂಚರಿಸಲು ಹರಸಾಹಸಪಟ್ಟವು.