

ಮಂಜುನಾಥ ಅಯ್ಯಸ್ವಾಮಿ ಹಂಪಿ
ಉತ್ಸವದ ಎರಡನೇ ದಿನ ಶನಿವಾರ ವಿಜಯವಿಠ್ಠಲ ದೇಗುಲದಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನ ಗಮನ ಸೆಳೆಯಿತು.
ವಿಜಯ ವಿಠ್ಠಲದ ದೇಗುಲದಲ್ಲಿ ಎರಡನೇ ಬಾರಿಗೆ ಯೋಗ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ಬಾರಿ ಕೂಡಾ ಜಿಲ್ಲಾಡಳಿತಕ್ಕೆ ಹಲವ ಸಂಘ-ಸಂಸ್ಥೆಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಕೈಜೋಡಿಸಿದ್ದರು.
ಯೋಗ ವೈಭವವನ್ನು ಕಣ್ತುಂಬಿಕೊಳ್ಳುವ ಕುತೂಹಲದಿಂದ ನೂರಾರು ಜನರು ಪಾಲ್ಗೊಂಡಿದ್ದರು. ಯೋಗ ಪ್ರದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದ ಪಟುಗಳು ತಂಡೋಪತಂಡವಾಗಿ ಶನಿವಾವಾರ ನಸುಕಿನ ಜಾವ ವಿಜಯವಿಠ್ಠಲದ ಕಡೆ ಹಾಕಿದರು. ನಿಗದಿತ ವೇದಿಕೆಯ ಮುಂಭಾಗದಲ್ಲಿ ಶಿಸ್ತುಬದ್ಧವಾಗಿ ನೆಲಹಾಸು ಹಾಕಿಕೊಂಡರು. ಒಂದಷ್ಟು ಹೊತ್ತು ತಾಲೀಮು ನಡೆಸಿ ಯೋಗ ಪ್ರದರ್ಶನಕ್ಕೆ ಸಜ್ಜಾದರು.
ಇದನ್ನೂ ಓದಿ: ಯೋಜನೆ ಸದುಪಯೋಗ ಪಡಿಸಿಕೊಳ್ಳಲಿ
ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಲವು ಆಸನಗಳನ್ನು ಪ್ರದರ್ಶಿಸಿದರು. ಸೂರ್ಯನ ಕಿರಣಗಳು ಆಗಷ್ಟೇ ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ತಂಗಾಳಿ ತೀಡಿ ಯೋಗಪಟುಗಳಿಗೆ ಮುದ ನೀಡಿತು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಪತಂಜಲಿ ಯೋಗಪೀಠ ಭವರ್ ಲಾಲ್ ಆರ್ಯ, ಆಯುಷ್ ಇಲಾಖೆಯ ಡಾ.ಸರಳಾ ಇತರರಿದ್ದರು.
ಒತ್ತಡ, ಕಲಬೆರಕೆ ಆಹಾರ, ಶ್ರಮರಹಿತ ಜೀವನ, ವೈಜ್ಞಾನಿಕ ಸಾಧನಗಳ ದುರ್ಬಳಕೆ ಹಾಗೂ ದುಶ್ಚಟಗಳಿಂದ ಅನೇಕ ರೋಗಗಳಿಗೆ ಮನುಷ್ಯ ಬಲಿಯಾಗಿದ್ದಾನೆ. ಯಾರು ಯೋಗವನ್ನು ಅನುಸರಿಸುತ್ತಾರೊ ಅವರಿಗೆ ಆರೋಗ್ಯ ಸಂಪತ್ತು ಪ್ರಾಪ್ತಿಯಾಗಲಿವೆ. ಉತ್ತಮ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನವು ನಿಯಮಿತ ಯೋಗ ಮಾಡುವುದರಿಂದ ಮನಸ್ಸಿನ ಹಾಗೂ ದೇಹದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು - ವಚನಾನಂದ ಸ್ವಾಮಿಜಿ, ಹರಿಹರ ಪಂಚಮಸಾಲಿ ಪೀಠಾಧಿಪತಿ. ಕಠಿಣವಾದದನ್ನು ಮಾಡುವುದು, ಮನಸ್ಸು ಹಾಗೂ ದೇಹ ನಿಗ್ರಹಿಸಲು ಮಾಡುವ ದಂಡನೆಯೇ ಯೋಗ. ಯೋಗ ನಮ್ಮ ಜೀವನದ ಭಾಗ ಹಾಗೂ ನಿತ್ಯಕ್ರಿಯೆಯಾಗಬೇಕು. ಹಂಪಿ ಉತ್ಸವದಲ್ಲಿ ಮೊದಲ ಬಾರಿ ಯೋಗ ನಡೆಯಲು ಚಾಲನೆ ನೀಡಿದ್ದು ಒಂದು ಸಾಧನೆ. ಇದು ನಿಜವಾಗಿಯೂ ಆಗಬೇಕಾದ ಕಾರ್ಯವೂ ಹೌದು. ಮುಂದೆ ಪ್ರಮುಖ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. - ಎಂ.ಎಸ್.ದಿವಾಕರ ಜಿಲ್ಲಾಧಿಕಾರಿ, ವಿಜಯನಗರ