

ಹಂಪಿ: ಒಂದು ಕೊಬ್ಬಿದ ಟಗರು, ಇನ್ನೊಂದು ಕಾಳಗಕ್ಕೆ ಸಿದ್ಧಗೊಂಡಿರುವ ಟಗರು, ಮತ್ತೊಂದು ಕಣ್ಣು ಹುಬ್ಬೇರಿಸುವ ಸುಂದರ ಕುರಿ ಹೀಗೆ ವಿವಿಧ ಬಗೆಯ ಟಗರು, ಕುರಿ ಮತ್ತು ಮೇಕೆಗಳ ಪ್ರದರ್ಶನ ಉತ್ಸವದ ಎರಡನೇ ದಿನ ನೋಡುಗರ ಮನ ಸೆಳೆಯಿತು.
ಪಶುಪಾಲನಾ ಇಲಾಖೆಯಿಂದ ಕಮಲಾಪುರದ ಹವಾಮಾ ಕಚೇರಿ ಹಿಂಭಾಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಟಗರು, ಕುರಿ ಹಾಗೂ ಮೇಕೆಗಳ ಪ್ರದರ್ಶದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 51 ಟಗರು ಹಾಗೂ ಕುರಿಗಳು ಭಾಗವಹಿಸಿದ್ದು ಕಂಡುಬಂತು.
ಬಳ್ಳಾರಿ ತಳಿ(ಡೆಕ್ಕನ್ ತಳಿ), ಕೆಂದೂಳಿ, ಕಪ್ಪು ಕುರಿ, ಬನ್ನೂರ್ ಕುರಿ, ಡಾಬರ್ ತಳಿ ಹಾಗೂ ರ್ಯಾಂಬೋಲನ್ ತಳಿಯ ಟಗರು ಮತ್ತು ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಫ್ರಾನ್ಸ್ ನ ಬುಲೆಟ್ ರ್ಯಾಂಬೋಲೋ ತಳಿಯ ಟಗರು ಪ್ರದರ್ಶನದಲ್ಲಿ ಹೆಚ್ಚು ಗಮನ ಸೆಳೆಯಿತು. ಇದರ ಬೆಲೆ 48 ಸಾವಿರ ರೂ., ಉಣ್ಣೆ ಹಾಗೂ ಮಾಂಸಕ್ಕಾಗಿ ಹೆಸರಾಗಿದೆ ಎಂದು ಮಾಲೀಕ ಕೊಂಡನಾಯಕನಳ್ಳಿಯ ಮಾರುತಿ ತಿಳಿಸಿದರು. ಇದರೊಂದಿಗೆ ಬಗೆ ಬಗೆಯ ತಳಿಯ ಟಗರು ಮತ್ತು ಮೇಕೆಗಳು ಪ್ರೇಕ್ಷಕರ ಗಮನ ಸೆಳೆದವು.
ಪ್ರದರ್ಶನದಲ್ಲಿ ಕುರಿ ಮತ್ತು ಟಗರುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚರ್ಮ ಸ್ಪರ್ಶಿಸುವ ಮೂಲಕ ಆರೋಗ್ಯ, ಹಲ್ಲು ಸೇರಿ ಸಮರ್ಥನೆಗೆ ಒಳಪಡಿಸಿದ ಬಳಿಕ ತೀರ್ಪುಗಾರರು ಅವುಗಳ ಚಲನವಲನಗಳನ್ನು ಪರಿಶೀಲಿಸಿ ಬಹುಮಾನ ಘೋಷಿಸಿದರು.
ಮಲಪನಗುಡಿಯ ಶಂಕ್ರಪ್ಪ ಎಂಬುವವರ ಡೆಕ್ಕನ್ ತಳಿ(ಬಳ್ಳಾರಿ ತಳಿ) ಟಗರು (ಪ್ರಥಮ) 10 ಸಾವಿರ ರೂ.ನಗದು, ಕೊಂಡನಾಯಕನ ಹಳ್ಳಿಯ ಮಾರುತಿ ಅವರ ರ್ಯಾಂಬೋಲೋ ತಳಿಯ ಟಗರು (ದ್ವಿತೀಯ) 7,500 ರೂ. ನಗದು, ಹೊಸಪೇಟೆಯ ಆರ್.ಮಂಜುನಾಥ ಅವರ ಬನ್ನೂರ್ ತಳಿಯ ಕುರಿಗೆ (ತೃತೀಯ) 5,000 ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು. 4 ಮತ್ತು 5 ನೇ ಸ್ಥಾನ ಪಡೆದ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ಪ್ರಮಾಣ ಪತ್ರ ಹಾಗೂ ಪಶು ಆಹಾರದ ಕಿಟ್ ವಿತರಿಸಿದರು.
ತೀರ್ಪುಗಾರರಾಗಿ ಶಿವಮೊಗ್ಗ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡಾ.ಸತೀಶ್ ಮತ್ತು ಡಾ.ವೀರನಗೌಡ ಭಾಗವಹಿಸಿದರು. ಪ್ರದರ್ಶನದಲ್ಲಿ ಕುರಿ ಮತ್ತು ಟಗರು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಕ್ರಮ, ಆಹಾರ ಪದ್ಧತಿ ಹಾಗೂ ಅವುಗಳ ಆರೋಗ್ಯ ನಿರ್ವಹಣೆ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಕುರಿ ಮತ್ತು ಟಗರುಗಳಿಗೆ ಇಲಾಖೆ ವತಿಯಿಂದ ಮಾಲೀಕರಿಗೆ ಪ್ರಮಾಣ ಪತ್ರ, ಪಶು ಆಹಾರದ ಕಿಟ್ ವಿತರಿಸಲಾಯಿತು.
ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಭೇಟಿ ನೀಡಿದರು. ಪಶುಪಾಲನಾ ಇಲಾಖೆ ಡಿಡಿ ಡಾ.ಪೋವರ್ ಸಿಂಗ್ ನಾಯಕ, ಸಹಾಯಕ ನಿರ್ದೇಶಕ ಡಾ.ಮಂಜುನಾಥ, ಅಧಿಕಾರಿಗಳಾದ ಡಾ.ಸೂರಪ್ಪ, ಡಾ.ಸಂತೋಷ್, ಸಿ.ಚೆನ್ನಪ್ಪ, ಚಿದಾನಂದಪ್ಪ ಬಿ. ಇತರರಿದ್ದರು.