

ಹಂಪಿ: ಉತ್ಸವದ ಎರಡನೇ ದಿನವಾದ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕಲಾವಿದರು ಗಂಧರ್ವ ಲೋಕವನ್ನೇ ಧರೆಗಿಳಿಸಿದರು.
ಎದುರು ಬಸವಣ್ಣ ವೇದಿಕೆಯಲ್ಲಿ ಸಂಜೆ ಚಿಕ್ಕಬಳ್ಳಾಪುರ ಜಿಲ್ಲೆ ಕೈವಾರದ ಗಾಯತ್ರಿ ಮತ್ತು ತಂಡ ಸಮೂಹ ನೃತ್ಯದ ಮೂಲಕ ಹಂಪಿಯ ಸೊಬಗಿನ ಕಲೆಯನ್ನು ಅನಾವರಣಗೊಳಿಸಿದರು. ಹಾಸನ ಜಿಲ್ಲೆಯ ಬೇಲೂರಿನ ನರಸಿಂಹಸ್ವಾಮಿ ಸಂಗಡಿಗರು ಸಾಕ್ಸೋಫೋನ್ ವಾದನ ಕೇಳುಗರ ಕಿವಿ ಇಂಪಾಗಿಸಿತು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಗಮನ ಸೆಳೆದ ನೃತ್ಯ ರೂಪಕಗಳು
ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ವಿದೇಶಿಗರು ಸಹ ತಲೆದೂಗಿದ್ದು ಕಂಡುಬಂತು. ಬಳ್ಳಾರಿಯ ಫೋರ್ಡಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಕನ್ನಡ ನಾಡಿನ ಜೀವನದಿ ಕಾವೇರಿ, ಗಲ್ಲು ಗಲ್ಲೇನುತ ಗೆಜ್ಜೆ ಗಲ್ಲುಸಾಜೆನುತ, ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಹಂಪಿಯ ಗುಡಿ ಎನ್ನುವ ಸಂಗೀತಕ್ಕೆ ಪ್ರದರ್ಶಿಸಿದ ನೃತ್ಯ ನೋಡುಗರ ಮನಸೂರೆಗೊಂಡಿತು.
ಬಳ್ಳಾರಿಯ ಬಿ.ವೀಣಾಕುಮಾರಿ ತಂಡ ರಂಗಗೀತೆಗಳನ್ನು ಹಾಡಿತು. ಗಂಗಾವತಿಯ ವಿದ್ಯಾಶ್ರೀ ಸಾಲಿಮಠ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಬೀದರ್‌ನ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರ ಮತ್ತು ಬೆಂಗಳೂರಿನ ಕನ್ನಡ ಕಲಾ ಲಯ ಟ್ರಸ್ಟ್ ತಂಡ ವತಿಯಿಂದ ನೃತ್ಯ ರೂಪಕ ಪ್ರದರ್ಶಿಸಿತು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಸ್ಮರಣಿಕೆ ಹಾಗೂ ಪ್ರಮಾಣಪತ್ರ ವಿತರಣೆ ಮಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಸಂಗಯ್ಯ ಎದುರು ಬಸವಣ್ಣ ವೇದಿಕೆ ರಾಯಭಾರಿಯಾಗಿದ್ದರು.