ಇತಿಹಾಸ ಮರುಸೃಷ್ಟಿಸಿದ ಧ್ವನಿ-ಬೆಳಕು ಕಾರ್ಯಕ್ರಮ

Hampi Utsav 25 Dwani Belaku Programmee
ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಚಾಲನೆ ಸಂದರ್ಭ ಸಚಿವ ಜಮೀರ್, ತಂಗಡಗಿ, ನಟ ರಮೇಶ ಅರವಿಂದ, ನಟಿಯರಾದ ಪ್ರೇಮಾ, ಪೂಜಾಗಾಂಧಿ ಇತರರಿದ್ದು.
Published on

ಹಂಪಿ: ಕುದುರೆ ಹಾಗೂ ಆನೆ ಲಾಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರಂಗದ ಮೇಲೆ ವಿಜಯನಗರ ವೈಭವನ್ನು ಮರುಸೃಷ್ಟಿಸಿತು. ಈ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಗ್ರಾಯಿತ್ರಿ ಪೀಠ ಬಳಿಯ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಉದ್ಘಾಟಿಸಲಾಯಿತು. ನಂತರ ಸಾಂಕೇತಿಕವಾಗಿ ರಂಗಪ್ರಯೋಗ ಪ್ರಸ್ತುತ ಪಡಿಸಲಾಯಿತು. ಭಾರತದ ಮಧ್ಯಕಾಲೀನ ಇತಿಹಾಸದ ಹಿನ್ನೆಲೆ, ದೆಹಲಿ ಸುಲ್ತಾನ ಪ್ರವರ್ಧಮಾನದ ನಡುವೆ, ಇಡೀ ದಕ್ಷಿಣ ಭಾರತದ ಸಾಮ್ರಾಜ್ಯಗಳು, ರಾಜ ಮನೆತನಗಳು ಸೋತಿದ್ದಾಗ ಗುರು ವಿದ್ಯಾರಣ್ಯರ ಮಾರ್ಗದರ್ಶನದೊಂದಿಗೆ ಹರಿಹರ ಮತ್ತು ಬುಕ್ಕರಾಯರು ದೆಹಲಿ ಸುಲ್ತಾನರಿಗೆ ಸೆಡ್ಡು ಹೊಡೆದು ವಿಜಯನಗರ ಸಾಮ್ರಾಜ್ಯದ ಸುವರ್ಣಯುಗಕ್ಕೆ ಹಸ್ತಿಭಾರ ಹಾಕಿದರು.

ಸುಮಾರು 2 ಗಂಟೆಗಳಲ್ಲಿ ವಿಜಯನಗರ ಸ್ಥಾಪನೆ, ಪ್ರವರ್ಧಮಾನ, ಕೃಷ್ಣದೇವರಾಯನ ಕಾಲದ ಸುವರ್ಣ ಯುಗ ಹಾಗೂ ವಿಜಯನಗರ ಪತನದ ಕತೆಯನ್ನು ಸುಮಾರು 110 ಕಲಾವಿದರು, ಹಿನ್ನೆಲೆ ಧ್ವನಿ, ವಿವಿಧ ಬಣ್ಣಗಳ ಬೆಳಕು, ಮಧುರ ಸಂಗೀತದೊಂದಿಗೆ ಪ್ರಸ್ತುತ ಪಡಿಸಿದರು. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಂಪಿ ಉತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ಅದ್ಭುತ ಕಾರ್ಯಕ್ರಮವಾಗಿದೆ. ಮಾ.6 ರವರೆಗೆ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ. ಇತಿಹಾಸದ ಗತವೈಭವನ್ನು ವರ್ತಮಾನದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಧ್ವನಿ ಬೆಳಕು ರಂಗಪ್ರಯೋಗಕ್ಕೆ ಖ್ಯಾತ ನಟರಾದ ವಿಷ್ಣುವರ್ಧನ, ಭಾರತಿ ವಿಷ್ಣುವರ್ಧನ, ಶ್ರೀನಾಥ, ಸಿ.ಆರ್.ಸಿಂಹ, ಶ್ರೀನಿವಾಸ ಮೂರ್ತಿ, ರಾಮಕೃಷ್ಣ, ಉಮಾಶ್ರೀ, ಶ್ರುತಿ ಹಾಗೂ ಖ್ಯಾತ ನಟ, ನಟಿಯರು ಧ್ವನಿ ನೀಡಿದ್ದಾರೆ. ಇದರೊಂದಿಗೆ ಶಾಸ್ತ್ರೀಯ ನೃತ್ಯ ಸಂಯೋಜನೆ, ದಿ.ಸೂರ್ಯನಾಥ್ ಕಾಮತ್ ಹಾಗೂ ದಿ.ಸಿ.ಅಶ್ವತ್ಥ್ ಅವರ ಸಂಗೀತ ಕಾರ್ಯಕ್ರಮದ ಮೆರುಗು ಹೆಚ್ಚಿಸಿದೆ.

ಪಿಐಬಿ ಸಂವಹನ ಇಲಾಖೆ ನಿರ್ದೇಶಕ ಡಾ.ಜಿತೇಂದ್ರ ಪಾಟೀಲ್, ಉಪನಿರ್ದೇಶಕ ಜೈಕುಮಾರ್, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ.ಜೋಶಿ, ನೃತ್ಯ ಸಂಯೋಜನಕಿ ಡಾ.ಶೀಲಾ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net