ಕರ್ನಾಟಕದ ಇತಿಹಾಸ ಉಳಿಸಿ ಮೆರೆಸೋಣ - ಕಾನೂನು ಸಚಿವ ಎಚ್.ಕೆ.ಪಾಟೀಲ್ ಆಶಯ

Hampi Utsav HK patil Innagration
ಹಂಪಿ ಉತ್ಸವದ ಎರಡನೇ ದಿನದ ವೇದಿಕೆ ಕಾರ್ಯಕ್ರಮವನ್ನು ಸಚಿವ ಎಚ್.ಕೆ.ಪಾಟೀಲ್ ಶನಿವಾರ ಉದ್ಘಾಟಿಸಿದರು. ಶಾಸಕರಾದ ಬಿ.ದೇವೇಂದ್ರಪ್ಪ, ಎನ್.ಟಿ.ಶ್ರೀನಿವಾಸ, ಎಚ್.ಆರ್.ಗವಿಯಪ್ಪ, ಡಿಸಿ ಎಂ.ಎಸ್.ದಿವಾಕರ್ ಇದ್ದರು.
Published on

ಹಂಪಿ (ಎಂ.ಪಿ.ಪ್ರಕಾಶ ವೇದಿಕೆ): ಹಂಪಿ ಅಂದರೆ ಕರ್ನಾಟಕ, ಕನ್ನಡ ನಾಡು. ಇದು ಶಕ್ತಿ ಕಣ, ದೇವಿ ಕಣ, ಮಂತ್ರಿ ಕಣ ಎಂದು ಕವಿ ಕುವೆಂಪು ಹೇಳಿದ್ದಾರೆ. ಇಂಥ ಕರ್ನಾಟಕ ನಮ್ಮದು ಎಂಬುದೇ ಹೆಮ್ಮೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಹಂಪಿ ಉತ್ಸವದ ಎರಡನೇ ದಿನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಹಂಪಿಯ ಒಂದೊಂದು ಕಲ್ಲು ಇತಿಹಾಸ ಹೇಳುತ್ತದೆ. ಜಗತ್ತಿನ ಇತಿಹಾಸಕಾರರು ಹಂಪಿ ವೈಭವ ಹೊಗಳಿದ್ದಾರೆ. ಇದೇ ಕಾರಣಕ್ಕೆ ಯುನೆಸ್ಕೊ ಹಂಪಿಯನ್ನು ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಿ ರಕ್ಷಿಸುತ್ತಿದೆ. ಇಂಥ ಪ್ರದೇಶ ಕಟ್ಟಿ, ಪೋಷಿಸಿದವರನ್ನು ನೆನೆಯಲು ಉತ್ಸವ ಆಚರಿಸಲಾಗುತ್ತಿದೆ ಎಂದರು.

ವಿಜಯನಗರ ಸಾಮ್ರಾಜ್ಯ ಎಲ್ಲ ಜಾತಿ, ಸಮುದಾಯದವರನ್ನು ಒಳಗೊಂಡಿತ್ತು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ರೂಪಕಕ್ಕೆ ಹಂಪಿ ಹೊಂದಾಣಿಕೆ ಯಾಗುತ್ತದೆ. ಉತ್ಸವಕ್ಕಾಗಿ ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಶ್ರಮ ವಹಿಸಿರಬಹುದು. ಇದೆಲ್ಲಕ್ಕಿಂತ ಹೆಚ್ಚು ಶ್ರಮಿಸಿದವರು ಎಂ.ಪಿ.ಪ್ರಕಾಶ. ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಅವುಗಳನ್ನು ಹಂಪಿಯಂತೆ ಅಭಿವೃದ್ಧಿಪಡಿಸಿ ಉಳಿಸಬೇಕಿದೆ. ಕರ್ನಾಟಕದ ನೈಜ ಇತಿಹಾಸ ಉಳಿಸಿ ಮೆರೆಸೋಣ. ಹಂಪಿ ಉತ್ಸವದಂತೆ ನಾಡಿನ ಎಲ್ಲ ಉತ್ಸವ ಆಯೋಜಿಸಲಾಗುತ್ತಿದೆ. ನಮ್ಮ ಭವ್ಯ ಇತಿಹಾಸವನ್ನು ಉಳಿಸಿಕೊಳ್ಳಬೇಕೆಂದು ಸಚಿವ ಎಚ್.ಕೆ.ಪಾಟೀಲ್ ಮನವಿ ಮಾಡಿದರು. ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮನವಿ ಮಾಡಿರುವೆ. ಇದರಿಂದ ಈ ಭಾಗದಲ್ಲಿ ಇನ್ನಷ್ಟು ಉದ್ಯೋಗವಕಾಶ ಸೃಷ್ಟಿಯಾಗಲಿವೆ ಎಂದರು.

ಡಿಸಿ ಎಂ.ಎಸ್.ದಿವಾಕರ ಮಾತನಾಡಿ, ಪ್ರವಾಸೋದ್ಯಮ ಸಚಿವರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ಸ್ಮಾರಕಗಳನ್ನು ಪರಿಚಯಿಸುವ ಕೆಲಸ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಮಹಾನವಮಿ ದಿಬ್ಬವನ್ನು ಹೆಚ್ಚುವರಿ ವೇದಿಕೆಯಾಗಿ ರಚಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚಿಸಿದ್ದೇವೆ. 5 ಸಾವಿರಕ್ಕೂ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಈ ಪೈಕಿ ಶೇ.80 ಸ್ಥಳೀಯ ಕಲಾವಿದರು ಇದ್ದಾರೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮೊದಲ ದಿನ 1.5ಲಕ್ಷ ಜನ ಭೇಟಿ ನೀಡಿದ್ದಾರೆ. ಶನಿವಾರ 2ರಿಂದ 3 ಲಕ್ಷ ಜನ ಬಂದಿದ್ದಾರೆ. ಮೂರನೇ ದಿನ ಇನ್ನಷ್ಟು ಜನ ಬರುವ ನಿರೀಕ್ಷೆ ಇದೆ ಎಂದರು.

ಹಂಪಿ ಉತ್ಸವ ಲಾಂಛನ ರಚಿಸಿದ ಕಲಾವಿದ ದೀಪಕ್ ಬಾಣದ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಬಿ.ದೇವೇಂದ್ರಪ್ಪ, ಎನ್.ಟಿ.ಶ್ರೀನಿವಾಸ್, ಹೊಸಪೇಟೆ ನಗರಸಭೆ ಅಧ್ಯಕ್ಷ ರೂಪೇಶ ಕುಮಾರ್, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀಹರಿಬಾಬು ಇತರರಿದ್ದರು.

ಪ್ರೆಸಿಡೆಂಟ್‌ಗಿಂತ ದೊಡ್ಡ ಹುದ್ದೆ

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಅವರ ಪರಿಚಯ ಮಾಡುವಾಗ ಸಚಿವ ಎಚ್.ಕೆ.ಪಾಟೀಲ್ ಹಂಪಿ ಗ್ರಾಪಂ ಅಧ್ಯಕ್ಷ ಪಟ್ಟ ಪ್ರೆಸಿಡೆಂಟ್ ಆಫ್ ಇಂಡಿಯಾ ಹುದ್ದೆಗಿಂತ ಕಡಿಮೆ ಅಲ್ಲ. ಇಷ್ಟೊಂದು ವೈಭವ, ಇತಿಹಾಸ, ಕಲೆ, ಸಂಸ್ಕೃತಿ ಹೊಂದಿರುವ ಸ್ಥಳದ ಅಧ್ಯಕ್ಷರಾಗುವುದು ಹೆಮ್ಮೆಯ ವಿಷಯ. ಅದನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದರು. ಈ ವೇಳೆ ಜನ ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net