

ಮಂಜುನಾಥ ಅಯ್ಯಸ್ವಾಮಿ ಹಂಪಿ
ಇಲ್ಲಿನ ಮಾತಂಗ ಪರ್ವತ ಮೈದಾನದಲ್ಲಿ ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯದ ರಂಗೋಲಿ ನೋಡುಗರ ಗಮನ ಸೆಳೆಯಿತು.
ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು. ಸಿರಿಧಾನ್ಯಗಳ ಬಳಕೆ ಹಾಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿರಿಧಾನ್ಯ ಬೆಳೆಗಳು, ಬೆಳೆಕಾಳುಗಳು, ನೇಗಿಲು ಹಿಡಿದ ರೈತ, ಕೃಷಿ ಇಲಾಖೆ ಯೋಜನೆಗಳಾದ ಕೃಷಿ ಯಾಂತ್ರೀಕರಣ, ಸಂಸ್ಕರಣೆ, ಮಣ್ಣು ಆರೈಕೆ ಅಭಿಯಾನ, ಸೂಕ್ಷ್ಮ ನೀರಾವರಿ ಯೋಜನೆಗಳನ್ನು ರಂಗೋಲಿ ಚಿತ್ತಾರದ ಮೂಲಕ ವೈವಿಧ್ಯಮಯವಾಗಿ ರಚಿಸಲಾಗಿತ್ತು.
ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನದಲ್ಲಿ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಮತ್ತು ಜಮೀನುಗಳಲ್ಲಿ ನೀರಿನ ಹೊಂಡ ನಿರ್ಮಾಣ ಹಾಗೂ ಮಿಶ್ರ ಬೇಸಾಯದ ಜತೆಗೆ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ರೈತರಿಗೆ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಕೃಷಿ ಇಲಾಖೆಯ ವಸ್ತು ಪ್ರದರ್ಶನದಲ್ಲಿ ನಿರ್ಮಿಸಲಾದ ಹಳ್ಳಿಮನೆ ಕಲ್ಪನೆ ಗ್ರಾಮೀಣ ಸೊಗಡಿನ ಚಿತ್ರಣ ನೈಜವಾಗಿ ನೋಡುಗರಿಗೆ ಕಟ್ಟಿಕೊಟ್ಟಿದೆ. ಬೀಸುವ ಕಲ್ಲು, ನೀರಿನ ಬಾವಿ, ಒನಕೆಯ ಮೂಲಕ ಧಾನ್ಯಗಳ ಒಕ್ಕಣೆ, ಹೊಸಿಗೆ ಎಲ್ಲವೂ ಕಳೆದ ಹೋದ ಗ್ರಾಮೀಣ ಜನ ಜೀವನವನ್ನು ನೋಡುಗರಿಗೆ ಕಟ್ಟಿಕೊಡುತ್ತ್ತಿವೆ. ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರದ ರೇಣುಕಮ್ಮ, ಹುಲಿಗೆಮ್ಮ, ಹನುಮಕ್ಕ, ಹುಚ್ಚೆಂಗಮ್ಮ ಹಾಗೂ ಗೌರಮ್ಮ ಹಾಡಿದ ಸೋಬಾನ ಪದಗಳು ಜಾನಪದ ಸಾಹಿತ್ಯ ಸೊಬಗನ್ನು ಬಿಂಬಿಸುತ್ತಿವೆ.
ಜಮೀರ್ ಅವರು ಮಹಿಳೆಯರೊಂದಿಗೆ ಕೂತು ಬೀಸುಕಲ್ಲಿನಲ್ಲಿ ಧಾನ್ಯಗಳನ್ನು ಬೀಸಿದರು. ಒಕ್ಕಣೆಯಲ್ಲಿ ಒನಕೆ ಹಿಡುದು ಕಾಳು ಒಪ್ಪಮಾಡಿದರು. ಹಳ್ಳಿಮನೆ ಮುಂದಿನ ಬಾವಿಯಲ್ಲಿ ನೀರು ಸೇದಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಜತೆಯಾದರು. ಕುರುವತ್ತಿ ಬಸವೇಶ್ವರ ಪ್ರತಿಕೃತಿ, ಸಿರಿಧಾನ್ಯಗಳಿಂದ ನಿರ್ಮಿಸಲಾಗಿರುವ ನೇಗಿಲು ಹಿಡಿದ ರೈತ ಹಾಗೂ ಕೃಷಿ ಇಲಾಖೆಯ ಮುಖ್ಯ ಯೋಜನೆಗಳನ್ನು ವೀಕ್ಷಿಸಿದರು. ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀೀಹರಿ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಹಲವು ಗಣ್ಯರು, ರೈತರು, ಸಾರ್ವಜನಿಕರು ಇದ್ದರು.
ಫಲಪುಷ್ಪಗಳಲ್ಲಿ ವಿಜಯನಗರದ ಐಸಿರಿ
ಹಂಪಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಮುಖ್ಯ ಆಕರ್ಷಣೆಯಾಗಿದೆ. ಐದು ಕ್ವಿಂಟಲ್‌ಗೂ ಹೆಚ್ಚು ಹೂವುಗಳಿಂದ ವಿರೂಪಾಕ್ಷ ದೇವಸ್ಥಾನ ಮತ್ತು ಬಸವಣ್ಣನ ಮೂರ್ತಿಯನ್ನು ನಿರ್ಮಿಸಲಾಗಿದೆ. ಸಿರಿಧಾನ್ಯಗಳಿಂದ ಹಕ್ಕ-ಬುಕ್ಕರ ಮತ್ತು ವಿಜಯನಗರ ಲಾಂಛನವನ್ನು ರಚಿಸಲಾಗಿದ್ದು ಜನಮನ ಸೆಳೆಯಿತು. ಉತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳವನ್ನು ಸಚಿವ ಜಮೀರ್ ಅಹ್ಮದ್ ಉದ್ಘಾಟಿಸಿದರು. ಈ ಬಾರಿ ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.
ಸಿರಿಧಾನ್ಯಗಳಲ್ಲಿ ಹಕ್ಕಬುಕ್ಕರು, ವಿಜಯನಗರ ಲಾಂಛನ ತಯಾರಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಅಶೋಕ ಚಕ್ರ, ಸಂವಿಧಾನ ಪುಸ್ತಕವನ್ನು ಹೂವುಗಳಿಂದ ಅಲಂಕಾರ ಮಾಡಿ ಗಮನ ಸೆಳೆದಿದೆ. ಹೀಗಾಗಿ ಉತ್ಸವಕ್ಕೆ ಬರುತ್ತಿರುವ ಹೆಚ್ಚಿನ ಜನರು ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳವನ್ನು ನೋಡಿ ಸಂತಸ ಪಡುತ್ತಿದ್ದಾರೆ.