ಪ್ರವಾಸಿಗರಿಗೆ ಸಮಯ ವ್ಯರ್ಥ!

16 MANJU 06
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಶ್ವಪರಂಪರೆ ತಾಣ ಹಂಪಿಯಲ್ಲಿ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಟಿಕೆಟ್‌ಗಾಗಿ ಮತ್ತು ಬ್ಯಾಟರಿ ಚಾಲಿತ ವಾಹನಗಳಿಗಾಗಿ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ವಾಹನಗಳ ಕೊರತೆ ಮತ್ತು ಟಿಕೆಟ್ ಪಡೆಯಲು ಹರಸಾಹಸ ಪಡುವ ಕಾರಣ ಸ್ಮಾರಕಗಳನ್ನು ನೋಡುವುದಕ್ಕಿಂತ ಸಮಯ ವ್ಯರ್ಥ ಮಾಡುವುದೇ ಹೆಚ್ಚಾಗಿದೆ ಎಂದು ಪ್ರವಾಸಿಗರು ಅಳಲು ತೋಡಿಕೊಂಡಿದ್ದಾರೆ.

ಹಂಪಿಯ ವಿಜಯ ವಿಠಲ ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರು ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲಬೇಕಿದೆ. ನೆಟ್ ವರ್ಕ್ ಸಮಸ್ಯೆ ಮತ್ತು ಒಂದೇ ಕೌಂಟರ್ ಇರುವುದರಿಂದ ಪ್ರವಾಸಿಗರ ದಟ್ಟಣೆಗೆ ಸರಿದೂಗುತ್ತಿಲ್ಲ. ಜತೆಗೆ ಬ್ಯಾಟರಿ ಚಾಲಿತ ವಾಹನಗಳ ಕೊರತೆಯಿಂದಾಗಿ ಅವರು ಅನಗತ್ಯವಾಗಿ ಸಮಯ ವ್ಯರ್ಥ ಮಾಡಬೇಕಿದೆ. ವಿಜಯ ವಿಠಲ ದೇಗುಲ ನೋಡಲು ಬರುವ ಮೊದಲು ಪ್ರವಾಸಿಗರು ತಮ್ಮ ವಾಹನಗಳನ್ನು ಎರಡು ಕಿಲೋಮೀಟರ್ ದೂರ ನಿಲ್ಲಿಸಬೇಕಾಗುತ್ತದೆ. ಅಲ್ಲಿಂದ ಹೋಗಲು ಬ್ಯಾಟರಿ ಚಾಲಿತ ವಾಹನಗಳಿಗಾಗಿ ಕಾಯಬೇಕು ಅಥವಾ ನಡೆದುಕೊಂಡು ಹೋಗಬೇಕಾಗುತ್ತದೆ. ಅಲ್ಲದೆ, ಟಿಕೆಟ್ ಗಾಗಿ ಹೆಚ್ಚಿನ ಸಮಯ ಕಾಯಬೇಕಾಗಿರುವುದರಿಂದ ಒಂದೇ ದಿನದ ಪ್ರವಾಸಕ್ಕೆ ಬಂದವರು ಕೆಲವು ಸ್ಮಾರಕಗಳನ್ನು ನೋಡದೆಯೇ ವಾಪಸ್ ಹೋಗುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಟಿಕೆಟ್ ಕೌಂಟರ್‌ನಲ್ಲಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ಬ್ಯಾಟರಿ ಚಾಲಿತ ವಾಹನಗಳ ಸರಿಯಾದ ನಿರ್ವಹಣೆ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಇನ್ನು ಸರಿಯಾದ ಮಾಹಿತಿ ಫಲಕಗಳು ಇಲ್ಲದಿರುವುದರಿಂದ ಪ್ರವಾಸಿಗರು ಎರಡೆರಡು ಬಾರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದರೂ ಮಾಹಿತಿ ಕೊರತೆಯಿಂದಾಗಿ ಅವರಿಗೂ ಟಿಕೆಟ್ ಪಡೆಯುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಿಲ್ಲ ಎಂದು ಪ್ರವಾಸಿಗರು ಹೇಳಿದ್ದಾರೆ.

ಪ್ರವಾಸಿಗರಿಗೆ ಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆಯಿಂದ ಸಿದ್ಧರಿದ್ದೇವೆ. ಆದರೆ, ಕೇಂದ್ರ ಪುರಾತತ್ವ ಇಲಾಖೆಯ ಸಮನ್ವಯದ ಕೊರತೆಯಿಂದ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಕೇಂದ್ರ ಪುರಾತತ್ವ ಮತ್ತು ಹವಾಮಾನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರಭುಲಿಂಗ ತಳಕೆರಿ, ಡಿಡಿ, ಪ್ರವಾಸೋದ್ಯಮ, ವಿಜಯನಗರ

ಹಂಪಿಯ ವಿಜಯ ವಿಠಲ ದೇಗುಲದ ಬಳಿ ఒట్టు 20 బ్యాటరి ಚಾಲಿತ ವಾಹನಗಳಿದ್ದು, ಅದರಲ್ಲಿ 10 ವಾಹನಗಳು ಚಾಲ್ತಿಯಲ್ಲಿವೆ. ವಾರಾಂತ್ಯದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತದೆ. ಉಳಿದ ದಿನಗಳಲ್ಲಿ ಪ್ರವಾಸಿಗರು ಕಡಿಮೆ ಇರುತ್ತಾರೆ. ಆದರೂ, ನಿರ್ವಹಣೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.

ರಮೇಶ್ ಆಯುಕ್ತ, ಹವಾಮ, ಹಂಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net