

ಹೊಸಪೇಟೆ: ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ನವದೆಹಲಿಯ ಭಾರತ್ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ಕಾರ್ಯದರ್ಶಿ ವಿದ್ಯಾವತಿ ಅವರು ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ರಾಜ್ಯದ 15 ಗ್ರಾಪಂ ಸೇರಿ ದೇಶದ ವಿವಿಧೆಡೆಯಿಂದ 729 ಅರ್ಜಿಗಳು ಸ್ವೀಕೃತವಾಗಿದ್ದವು.
ಇದನ್ನೂ ಓದಿ: ಹಂಪಿ ವಿವಾದ: ಜಿಲ್ಲಾಡಳಿತದ ವಿರುದ್ಧ ಸಿಎಂ ಸಿಡಿಮಿಡಿ
ಆ ಪೈಕಿ ಕರ್ನಾಟಕದಿಂದ ಹಂಪಿ ಆಯ್ಕೆಯಾಗಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಂದೊಂದು ಗ್ರಾಮ ಪಂಚಾಯಿತಿ ರೂಪದಲ್ಲಿ ಒಟ್ಟು 35 ಗ್ರಾಪಂಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಪ್ರಶಸ್ತಿ ಮೊತ್ತವಿಲ್ಲ. ಆದರೆ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮ ಕಾರ್ಯಕ್ರಮಗಳಿಗೆ ಉತ್ತೇಜನ ದೊರೆಯಲಿದೆ ಎಂಬುದು ಹಂಪಿ ಜನರಲ್ಲಿ ಹರ್ಷ ಮೂಡಿಸಿದೆ.