ಹಂಪಿಯಲ್ಲಿ ಜ.24ರಂದು ಶ್ರೀಪುರಂದರ ದಾಸರ ಆರಾಧನೆ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ

Ballari Optional DC Manjunath
Published on

ಹೊಸಪೇಟೆ: ಹಂಪಿಯಲ್ಲಿ ಜ.24ರಂದು ದಾಸ ಶ್ರೇಷ್ಠ ಶ್ರೀಪುರಂದರ ದಾಸರ ಆರಾಧನೆಯನ್ನು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ತಿಳಿಸಿದರು.

ನಗರದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಂಪಿಯ ಪುರಂದರ ಮಂಟಪದಲ್ಲಿ ಆರಾಧನೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡುವರು. ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾವಿಜಯ ತೀರ್ಥರನ್ನು ಆಹ್ವಾನಿಸುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಲೋಕೇಶ್‌ಗೆ ಸೂಚಿಸಿದರು.

ನಾಡಿನ ಖ್ಯಾತ ದಾಸವಾಣಿ, ಹಿಂದೂಸ್ತಾನಿ, ಕರ್ನಾಟಕ ಸಂಗೀತ ಕಲಾವಿದರ ಅಹ್ವಾನಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧೇಶ್ವರ್‌ಗೆ ಹಾಗೂ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಮಹಿಳಾ ಭಜನಾ ಮಂಡಳಿಗಳ ಕರೆತರಲು ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ರಾವ್ ಹಾಗೂ ಅನಿಲ್ ಜೋಶಿಗೆ ತಿಳಿಸಿದರು. ಭಕ್ತರು, ಭಜನಾ ಮಂಡಳಿ ಸದಸ್ಯರಿಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಂಸ್ಥೆಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಎಚ್.ವಿಶ್ವನಾಥ್, ಆಹಾರ ಇಲಾಖೆ ಅಧಿಕಾರಿ ರಾಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ, ಸಿಡಿಪಿಒ ಅಮರೇಶ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net