

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಹಂಪಿಯಲ್ಲಿ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪಾರ್ಕಿಂಗ್ ಶುಲ್ಕದ ಶಾಕ್ ನೀಡಿದೆ. ಅ.1ರಿಂದ ನಾಲ್ಕು ಕಡೆ ಪ್ರತ್ಯೇಕವಾಗಿ ಪಾರ್ಕಿಂಗ್ ಶುಲ್ಕ ವಿಧಿಸಿದೆ.
ಹಂಪಿಗೆ ಪ್ರತಿದಿನ ದೇಶ ವಿದೇಶದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದೆರಡು ದಿನ ವಾಸ್ತವ್ಯ ಹೂಡಿ ಹಂಪಿ ಸುತ್ತಾಡುವ ಪ್ರವಾಸಿಗರಿಗೆ ಹೋಟೆಲ್ ರೂಮ್ ಬಾಡಿಗೆ, ಆಟೋ, ಊಟ-ಉಪಹಾರ ಮುಂತಾದ ಖರ್ಚು ಹೆಚ್ಚಾಗಿರುತ್ತದೆ. ಇದೀಗ ಇದಕ್ಕೆ ಪಾರ್ಕಿಂಗ್ ಶುಲ್ಕವೂ ಸೇರ್ಪಡೆಯಾಗಲಿದೆ.
ಈ ಮೊದಲು ಶ್ರೀ ವಿರೂಪಾಕ್ಷೇಶ್ವರ ದೇಗುಲ ಹೊರತುಪಡಿಸಿದರೆ ಉಳಿದ ಯಾವುದೇ ಸ್ಮಾರಕಗಳ ಬಳಿ ಪಾರ್ಕಿಂಗ್ ಶುಲ್ಕ ಇರಲಿಲ್ಲ. ಇದೀಗ ಕೇಂದ್ರ ಪುರಾತತ್ವ ಇಲಾಖೆ ಸೈಕಲ್ ಒಳಗೊಂಡಂತೆ ಐದು ತರಹದ ವಾಹನಗಳಿಗೆ ಶುಲ್ಕ ವಿಧಿಸಿದೆ. ಪ್ರವಾಸಿಗರು ಹಂಪಿ ಪ್ರವಾಸಕ್ಕೆ ಬರುವ ಮುನ್ನ ಒಮ್ಮೆ ಜೇಬು ಭರ್ತಿ ಇದೆಯಾ ಎಂದು ನೋಡಿಕೊಳ್ಳುವಂತಾಗಿದೆ. ಹಂಪಿಯಲ್ಲಿ ರಸ್ತೆ, ಕುಡಿವ ನೀರು, ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಇತರ ಮೂಲಸೌಕರ್ಯ ಇಲ್ಲ. ಹಂಪಿ ಒಂದೇ ದಿನ ನೋಡುವಂತೆ ಪ್ರವಾಸಿ ತಾಣವೂ ಅಲ್ಲ. ಆದರೀಗ, ಇಲ್ಲಿನ ಖರ್ಚು ಭರಿಸಲಾಗದೆ ಒಂದೇ ದಿನಕ್ಕೆ ಇಲ್ಲಿಂದ ಕಾಲು ಕೀಳುವಂತಾಗಿದೆ. ಪಾರ್ಕಿಂಗ್ ಶುಲ್ಕಕ್ಕೆ ಸ್ಥಳೀಯ ಆಟೋ, ಟ್ಯಾಕ್ಸಿ ಚಾಲಕರಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಪಾರ್ಕಿಂಗ್‌ನಲ್ಲಿ (ಗ್ರಾಮ ಪಂಚಾಯಿತಿ ಎದುರು) ಈ ಮೊದಲು ಬೈಕ್, ಆಟೋಗಳನ್ನು ಹೊರತುಪಡಿಸಿ ಶುಲ್ಕ ವಿಧಿಸಲಾಗುತ್ತಿದೆ. ಕಾರುಗಳಿಗೆ 10 ರೂ., ಬಸ್ ಗಳಿಗೆ 20 ರೂ. ಪಾವತಿ ಮಾಡಬೇಕಿದೆ. ಇದೀಗ ವಿಜಯವಿಠಲ ದೇಗುಲಕ್ಕೆ ಹೋಗುವ ಮುನ್ನ ಗೆಜ್ಜಲ ಮಂಟಪದ ನಾಲ್ಕು ಕಡೆ ಪಾರ್ಕಿಂಗ್ ನಿಗದಿಪಡಿಸಲಾಗಿದೆ. ರಾಣಿ ಸ್ನಾನಗೃಹ, ಕಮಲ್ ಮಹಲ್, ಶ್ರೀಕೃಷ್ಣ ದೇಗುಲ ಬಳಿ ಪ್ರತ್ಯೇಕವಾಗಿ ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ. ಸೈಕಲ್‌ಗೆ 5 ರೂ.. ಬೈಕ್‌ಗೆ 10 ರೂ.. ಆಟೋಗಳಿಗೆ 20 ರೂ.. ನಾಲ್ಕು ಚಕ್ರ (ಎಲ್‌ಎಂವಿ) ವಾಹನಕ್ಕೆ 30 ರೂ.. ನಾಲ್ಕು ಚಕ್ರ (ಎಚ್ಎಂವಿ) ವಾಹನಗಳಿಗೆ 40 ರೂ., 6 ಚಕ್ರ ವಾಹನಗಳಿಗೆ 60 ರೂ. ಶುಲ್ಕ ವಿಧಿಸಲಾಗಿದೆ. ನಾಲ್ಕು ಕಡೆ ಪಾರ್ಕಿಂಗ್‌ಗೆ ಪ್ರವಾಸಿಗರು ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ.
ಹಂಪಿಗೆ ಬರುವ ಪ್ರವಾಸಿಗರಿಗೆ ಮೂಸೌಕರ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಪಾರ್ಕಿಂಗ್ ಶುಲ್ಕದ ವಿಚಾರ ನನಗೆ ತಿಳಿದಿಲ್ಲ. ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಕವಿತಾ ಎಸ್.ಮನ್ನಿಕೇರಿ ಡಿಸಿ, ವಿಜಯನಗರ ನಮ್ಮ ಇಲಾಖೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮಾಧ್ಯಮದ ಜತೆ ಹಂಚಿಕೊಳ್ಳುವಂತಿಲ್ಲ. ಯಾವುದೇ ಹೇಳಿಕೆಯನ್ನೂ ನಾವು ಹೇಳುವುದಿಲ್ಲ. ರಾಮಕೃಷ್ಣ ರೆಡ್ಡಿ, ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕ, ಹೊಸಪೇಟೆ ಹಂಪಿಯ ಪ್ರಮುಖ ಸ್ಮಾರಕಗಳು ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿವೆ. ಕೇಂದ್ರ ಪುರಾತತ್ವ ಇಲಾಖೆ ತೀರ್ಮಾನಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಆದರೂ, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವೆ. ಪ್ರಭುಲಿಂಗ ತಳಕೆರೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ, ಹಂಪಿ