ಉಸಿರಿಗಿಂತ ಮಾಡುವ ಕಾರ್ಯ ಶಾಶ್ವತ

27 MANJU 03
Published on

ಹೊಸಪೇಟೆ: ಹಂಪಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಒಂದು ಕೋಟಿ ರೂ. ಸಿಎಸ್‌ಆರ್ ಅನುದಾನದ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಸದ ಈ.ತುಕಾರಾಂ ಸೋಮವಾರ ಭೂಮಿ ಪೂಜೆ ಮಾಡಿದರು.

ನಂತರ ಮಾತನಾಡಿ, ಸಿಎಸ್‌ಆರ್‌ನಿಂದ 80 ಲಕ್ಷ ರೂ. ಅನುದಾನ ಹಾಗೂ ಸರ್ಕಾರದ 20 ಲಕ್ಷ ಅನುದಾನ ಒಟ್ಟು ಒಂದು ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮಾಧರಿಯಾದ ಸುಸಜ್ಜಿತ, ಅತ್ಯಾಧುನಿಕ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲಾಗುವುದು ಎಂದರು.

ನಮ್ಮ ಉಸಿರು ಶಾಶ್ವತವಲ್ಲ. ಆದರೆ ನಾವು ಮಾಡುವ ಕಾರ್ಯಗಳು ಯಾವಾಗಲೂ ಶಾಶ್ವತವಾಗಿ ಉಳಿಯುತ್ತವೆ. ಆಡಳಿತ ಕಚೇರಿ ಸುಸಜ್ಜಿತವಾಗಿದ್ದರೆ, ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಇದನ್ನು ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ದಿ ಕಾರ್ಯಗಳು ಕೇವಲ ಒಬ್ಬರಿಂದ ಮಾಡಲು ಸಾಧ್ಯವಿಲ್ಲ ಇದಕ್ಕೆ ಎಲ್ಲಾರ ಸಹಕಾರ ಅಗತ್ಯ ಎಂದರು.

ಜಿಲ್ಲೆಯ ಹಂಪಿ ಅಭಿವೃದ್ದಿಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ ನ.1 ರಿಂದ ಹಂಪಿ ಬೆಂಗಳೂರು ನಡುವೆ ನೂತನ ವಿಮಾನ ಸೇವೆ ಆರಂಭಿಸಲು ಸ್ಟಾರ್‌ಏರ್ ವೇಸ್ ಸಂಸ್ಥೆ ಮುಂದೆ ಬಂದಿದೆ. ಸಂಸದರ ಅನುದಾನದಲ್ಲಿ ಹಂಪಿ ಗ್ರಾಮ ಪಂಚಾಯಿತಿಗೆ 14 ಲಕ್ಷ ರೂ ವೆಚ್ಚದ 2 ಹೈಮಾಸ್ಟ್ ದೀಪಗಳನ್ನು ನೀಡಲಾಗುತ್ತದೆ ಎಂದರು.

ಜಿ.ಪಂ. ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ತಾಪಂ ಇಒ ಎಂ.ಡಿ.ಆಲಂ ಭಾಷಾ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮಹಮದ್‌ಇಮಾಮ್ ನಿಯಾಜಿ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಉಪಾಧ್ಯಕ್ಷ ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net