

ಹೊಸಪೇಟೆ: ಹಂಪಿಯ ಜನತಾ ಪ್ಲಾಟ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ತಲೆ ಎತ್ತಿರುವ ಹೋಟೆಲ್, ಹೋಂ ಸ್ಟೇಗಳ ಕುರಿತು ಸಮಗ್ರ ವರದಿ ನೀಡುವಂತೆ ಹಂಪಿ ವಿಶ್ವಪರಂಪರೆ ನಿರ್ವಹಣಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್.ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದರು.
ರಾಮಾಯಣ ಕಾಲದಿಂದಲೂ ವಿರೂಪಾಕ್ಷೇಶ್ವರ ದೇವಾಲಯ ಹಂಪಿಯಲ್ಲಿದೆ ಎಂಬ ಇತಿಹಾಸ ಇದೆ. ಹೀಗಾಗಿ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಇಂತಹ ಪುರಾಣ ಪ್ರಸಿದ್ಧ ನಿತ್ಯ ವಿರೂಪಾಕ್ಷನ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಲ್ಲದೇ, ಐತಿಹಾಸಿಕ ಸ್ಮಾಕರಗಳಿಂದಾಗಿ ವಿಶ್ವವಿಖ್ಯಾತಿ ಪಡೆದಿದ್ದು, ದೇಶ- ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಅವರಿಗೆ ಕನಿಷ್ಠ ಮೂಲ ಸೌಲಭ್ಯಗಳಿಲ್ಲ. ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು, ಪಂಪಾ ವಿರೂಪಾಕ್ಷ ದೇವಸ್ಥಾನವನ್ನೂ ಸ್ಮಾರಕವೆಂದು ಪರಿಗಣಿಸುತ್ತಿರುವುದು ದುರಂತ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಹೊಂದಿಕೊಂಡಿರುವ ಜನತಾ ಪ್ಲಾಟ್‌ನಲ್ಲಿ ಹಲವಾರು ವರ್ಷಗಳಿಂದ ಜನ ವಾಸವಾಗಿದ್ದಾರೆ. 140 ಮನೆಗಳಲ್ಲಿ ಎಲ್ಲೂ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿಲ್ಲ. 70 ಮನೆಗಳಲ್ಲಿ ಕೊಠಡಿಗಳ ನಿರ್ಮಿಸಿ ಹೋಂ ಸ್ಟೇ ನಡೆಸುತ್ತಿದ್ದಾರೆ. ಇದರಿಂದ ಹಂಪಿ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರ ದುಡಿಮೆಗೆ ಬೇರೆ ಅವಕಾಶಗಳೂ ಇಲ್ಲ. ರೂಮ್‌ಗಳನ್ನು ಬಾಡಿಗೆ ನೀಡುವುದಕ್ಕೂ ಕಡಿವಾಣ ಹಾಕಿದರೆ, ಬದುಕು ಬೀದಿಗೆ ಬರುತ್ತದೆ ಎಂದು ಅಳಲು ತೋಡಿಕೊಂಡರು.