

ಹೊಸಪೇಟೆ : ಹಂಪಿಗೆ ಪ್ರವಾಸಿಗರಿಗೆ ಹೆಚ್ಚುತ್ತಿರುವ ಹಿನ್ನಲೆ ಹಾಗೂ ಪ್ರವಾಸೋದ್ಯಮ ಉತ್ತೇಜಿಸಲು ಪಾರಂಪರಿಕ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇವರ ಸಹಯೋಗದೊಂದಿಗೆ ಹಂಪಿಯ ಎದುರು ಬಸವಣ್ಣ ಬಳಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರೆಯದ ಮತ್ತು ಮರೆಯಲಾಗದ ಸಾಮ್ರಾಜ್ಯ ಹಂಪಿಯಾಗಿದೆ. ಇಲ್ಲಿಯ ಪ್ರತಿಯೊಂದು ಸ್ಮಾರಕಗಳು ತನ್ನದೇ ಆದ ಕತೆಯನ್ನು ಹೇಳುತ್ತವೆ. ಪಾರಂಪರಿಕ ನಡಿಗೆ ಮೂಲಕ ಪ್ರತಿಯೊಂದು ಸ್ಮಾರಕದ ನೋಡುವ ಮೂಲಕ ಪ್ರತಿಯೊಬ್ಬರೂ ಇತಿಹಾಸ ಅರಿಯಬಹುದು. ವಾಹನಗಳಲ್ಲಿ ಹೋದರೆ ಎಲ್ಲ ಸ್ಮಾರಕವನ್ನು ನೋಡಲು ಆಗುವುದಿಲ್ಲ. ಹೀಗಾಗಿ ಈ ರೀತಿಯ ಕಾರ್ಯಕ್ರಮದಲ್ಲಿ ನಡಿಗೆ ಮೂಲಕ ಎಲ್ಲವನ್ನೂ ನೋಡಬಹುದಾಗಿದೆ. ಪ್ರವಾಸಿಗರಿಗೆ ಅನುಕೂಲ ಆಗುವಂತೆ ಹಂಪಿಯ ರಸ್ತೆಗಳ ಪರಿಚಯ ನಾಡಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಎಸಿ ವಿವೇಕಾನಂದ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ಕೆಎಸ್ ಟಿಡಿಸಿ ವ್ಯವಸ್ಥಾಪಕ ಸುನೀಲ್ ಇತರರಿದ್ದರು.