

ಹೊಸಪೇಟೆ: ದಕ್ಷಿಣಕಾಶಿ ಹಂಪಿ ಜಾತ್ರೆ ಎಂದೇ ಖಾತಿಯ ಶ್ರೀ ಪಂಪಾ ವಿರೂಪಾಕ್ಷೇಶ್ವರ ಹಾಗೂ ಶ್ರೀ ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದ್ದು, ಏ.12ರಂದು ಭ್ರಹ್ಮರಥೋತ್ಸವ ಜರುಗಲಿದೆ.
ರಥೋತ್ಸವಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ. ಹಂಪಿ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಆಜ್ಞಾನುಸಾರ ರಥೋತ್ಸವ ನಡೆಯಲಿದೆ. ವಿರೂಪಾಕ್ಷ ಬಜಾರ್‌ನ ಶೆಡ್‌ನಲ್ಲಿದ್ದ ಜೋಡಿ ರಥಗಳನ್ನು ಇತ್ತೀಚೆಗೆ ಹೊರ ತಂದು, ರಥವನ್ನು ಅಣಿಗೊಳಿಸಲಾಗುತ್ತಿದೆ.
ಏ.06ರಿಂದ ಸಿಂಹವಾಹನೋತ್ಸವ, ಚಂದ್ರಮAದಲೋತ್ಸವ, ಸೂರ್ಯಪ್ರಭ ವಾಹನೋತ್ಸವ, ಶೇಷ ವಾಹನೋತ್ಸವ, ಪುಷ್ಕಮಂಟಪ ವಾಹನೋತ್ಸವ ನಡೆದಿವೆ. ಗುರುವಾರ ವಿದ್ಯಾರಣ್ಯ ಪ್ರಪಥಮ ಪೀಠಾಧಿಧೀಶ್ವರರಾಗಿದ್ದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಜಯಂತಿ ಆಚರಣೆ ನಡೆದಿದೆ. ರಾತ್ರಿ 9ಕ್ಕೆ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಅವರ ಕಲ್ಯಾಣೋತ್ಸವ ಹಾಗೂ ರಜತ ನಂದಿವಾಹನೋತ್ಸವ ನಡೆದಿದೆ. ಶುಕ್ರವಾರ ಗಜವಾಹನೋತ್ಸವ ನಡೆಯಿತು. ಏ.12ರಂದು ಬ್ರಹ್ಮರಥೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವದ ನಾಲ್ಕಾರು ದಿನಗಳ ಮುನ್ನವೇ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಕ್ತರು, ಹಂಪಿಗೆ ಆಗಮಿಸುತ್ತಿದ್ದಾರೆ. ಪರಿವಾರ ಸಮೇತ ಹಂಪಿಯಲ್ಲಿ ವಾಸ್ತವ್ಯ ಹೂಡಿ, ಸ್ಥಳದಲ್ಲಿ ರುಚಿರುಚಿಯಾದ ಊಟ ಸಿದ್ಧಪಡಿಸಿ, ಸಹಭೋಜನ ಮಾಡುತ್ತಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಆರಸ ಶ್ರೀ ಕೃಷ್ಣದೇವರಾಯರು, ತಮ್ಮ ಪಟ್ಟಾಭಿಷೇಕ ಸಮಯದಲ್ಲಿ ವಿರೂಪಾಕ್ಷೇಶ್ವರನಿಗೆ ಕಾಣಿಕೆಯಾಗಿ ಸಲ್ಲಿಸಿದ ಸುವರ್ಣ, ರತ್ನ ಖಚಿತ ಮುಖ ಕೀರಿಟವನ್ನು ವಿರೂಪಾಕ್ಷೇಶ್ವರ ಸ್ವಾಮಿ ಪ್ರತಿಮೆಗೆ ತೊಡಿಸಿ, ಅಲಂಕಾರ ಮಾಡಲಾಗುತ್ತಿದೆ. ಇನ್ನೂ ನಾಲ್ಕು ದಿನಗಳ ಕಾಲ ಕೀರಿಟದ ಅಲಂಕಾರ ಸೇವೆ ನಡೆಯಲಿದೆ.
ಪ್ರತಿ ವರ್ಷ ಲಕ್ಷಾಂತರ ಭಕ್ತರು, ಹಂಪಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಾಡಿಕೆಯಂತೆ ಹಂಪಿ ಜಾತ್ರಾ ಪ್ರಯುಕ್ತ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಮೂಲೆ, ಮೂಲೆಗಳಿಂದ ಭಕ್ತರು, ಹಂಪಿಗೆ ಆಗಮಿಸಲಿದ್ದಾರೆ.
ಜಾತ್ರೆಯಲ್ಲಿ ವ್ಯಾಪಾರ-ವಹಿವಾಟು ನಡೆಸಲು, ವ್ಯಾಪಾರಸ್ಥರು, ಯುಗಾದಿ ಹಬ್ಬವಾದ ಬಳಿಕ ಹಂಪಿಯಲ್ಲಿ ಬಿಡಾರ ಹೂಡುತ್ತಾರೆ. ವಿರೂಪಾಕ್ಷ ರಥ ಬೀದಿಯ ಎರಡು ಬದಿಯಲ್ಲಿ ಹೂ-ಹಣ್ಣು, ಮೀಟಾಯಿ ಅಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿ-ಮುAಗಟ್ಟುಗಳು ಹಾಕುತ್ತಿದ್ದಾರೆ.
ಹಂಪಿ ಕೇವಲ ಪ್ರವಾಸಿ ತಾಣವಲ್ಲ ಧಾರ್ಮಿಖ ಕ್ಷೇತ್ರವಾಗಿದೆ. ಪಂಪಾ ವಿರೂಪಾಕ್ಷೇಶ್ವರ ಹಾಗೂ ಶ್ರೀ ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲಿದ್ದಾರೆ. ಭಕ್ತರಿಗೆ ಕುಡಿವ ನೀರು, ನೆರಳು ಸೇರಿದಂಥೆ ಇತರೆ ಮೂಲಸೌಕರ್ಯ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ