

ಹೊಸಪೇಟೆ: ಕರ್ಣಾಟಕ ಸಂಗೀತ ಪಿತಾಮಹ ಶ್ರೀಪುರಂದರ ದಾಸರ ಕೀರ್ತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ತಿಳಿಸಿದರು.
ಮಂತ್ರಾಲಯ ಮಠದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಹಂಪಿಯಲ್ಲಿ ಗುರುವಾರ ನಡೆದ ಶ್ರೀಪುರಂದರ ದಾಸರ ಉತ್ತರಾಧನೆಯಲ್ಲಿ ಮಾತನಾಡಿದರು.
ಮೂರು ದಿನಗಳ ಕಾಲ ನಡೆದ ಆರಾಧನೋತ್ಸವದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ಸದಸ್ಯರು ಭಜನೆ, ನೃತ್ಯ, ಕೋಲಾಟ, ವಿಚಾರಗೋಷ್ಠಿ, ದಾಸ ಸಾಹಿತ್ಯ ಚಿಂತನೆ, ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಉತ್ತರಾಧನೆ ನಿಮಿತ್ತ ಪುರಂದರ ಮಂಟಪದಲ್ಲಿ ಹರಿದಾಸರ ಭಾವಚಿತ್ರ ಹಿಡಿದು ನೃತ್ಯ ಗೀತೆಗಳೊಂದಿಗೆ ಪ್ರದಕ್ಷಿಣೆ ಮಾಡಿದರು.
ಉತ್ತರಾಧನೆ ಪ್ರಯುಕ್ತ ಶ್ರೀಪುರಂದರ ದಾಸರ ಮಂಟಪದಲ್ಲಿ ದಾಸರರಾಯರ ಕಂಬಕ್ಕೆ ಬೆಳಿಗ್ಗೆ ವಿಶೇಷವಾಗಿ ಫಲ ಪಂಚಾಮೃತಾಭಷೇಕ, ಅರ್ಚನೆ, ವಿವಿಧ ಹೂವುಗಳಿಂದ ಹಾಗೂ ವಸ್ತ್ರ ಅಲಂಕಾರ ನೆರವೇರಿಸಲಾಯಿತು. ಅಷ್ಟೋತ್ತರ, ಹರಿ ವಾಯುಸ್ತುತಿ ಪಾರಾಯಣ ನಡೆಯಿತು.
ಮಠಾಧಿಕಾರಿ ಪವನ್ ಆಚಾರ್ಯ, ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ಅರ್ಚಕ ನರಸಿಂಹ ಆಚಾರ್ಯ, ಪ್ರಮುಖರಾದ ಶೀರೆಕೊಳ ಗುರುರಾಜ್, ವಿಜಯಕುಮಾರ್, ವೆಂಕಟೇಶ್ ಇತರರಿದ್ದರು.