

ಹೊಸಪೇಟೆ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಾಲುಮಂಟಪಗಳ ಜೀರ್ಣೋದ್ದಾರ ವೇಳೆ ವಿಜಯನಗರದ ಅರಸರ ಕಾಲದ ಎಂಟು ಬಾವಿಗಳು ಪತ್ತೆಯಾಗಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಳೆದೊಂದು ವರ್ಷದಿಂದ ಸಾಲು ಮಂಟಪಗಳು ಜೀರ್ಣೋದ್ಧಾರ ಕಾರ್ಯ ಕೈಗೊಂಡಿದೆ. ಈ ಸಮಯದಲ್ಲಿ ವಿರೂಪಾಕ್ಷೇಶ್ವರ ದೇಗುಲದ ಮುಂದೆ ಒಂದು ಬಾವಿ ಕಾಣಿಸಿದ್ದು, ಮಣ್ಣು ತೆರವು ಕಾರ್ಯ ನಡೆದಿದೆ. ಕೇವಲ 12 ಅಡಿಯಲ್ಲಿ ಬಂಡೆ ಬಂದಿದ್ದು, ನಂತರ ನೀರಿನ ಸೆಲೆ ಕಂಡು ಬಂದಿದೆ. ಇದನ್ನು ಗಮನಿಸಿದ ಪುರಾತತ್ವ ಅಧಿಕಾರಿಗಳು ರಥ ಬೀದಿಯಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 8 ಬಾವಿಗಳನ್ನು ಪತ್ತೆ ಮಾಡಿದೆ. ಬಾವಿಗಳ ಕುರಿತು ಸಮಗ್ರ ಅಧ್ಯಯನ ನಡೆಸಬೇಕಿದ್ದು, ಇನ್ನಷ್ಟು ಸ್ಮಾರಕಗಳು ದೊರೆಯುವ ಸಾಧ್ಯತೆಯಿಂದ ಪುರಾತತ್ವ ಪರಿಣತರು ಆಗಮಿಸಿ ಪರಿಶೀಲಿಸಲಿದ್ದಾರೆ ಎಂದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ರವೀಂದ್ರ ಹತ್ತಿಕಾಳ ತಿಳಿಸಿದ್ದಾರೆ.
ರಸ್ತೆ ಬದಿ ಮಣ್ಣು ತೆರವು: ದಶಕಗಳ ಹಿಂದೆ ರಥಬೀದಿಯ ಸಾಲುಮಟಂಪದಲ್ಲಿ ವಾಸವಿದ್ದ ಜನರನ್ನು ಸ್ಥಳಾಂತರಿಸಲಾಗಿತ್ತು. ಮಳೆಗೆ ಹಲವು ಮಂಟಪಗಳು ಕುಸಿದಿದ್ದವು. ಆದ್ದರಿಂದ ಸ್ಮಾರಕಗಳ ಭದ್ರತೆ ಹಾಗೂ ನೈಜತೆಯನ್ನು ಕಾಪಾಡಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜೀರ್ಣೋದ್ದಾರ ಕಾರ್ಯ ಕೈಗೊಂಡಿದೆ. ಮ ಮಂಟಪಗಳ ಮುಂದೆ ಎರಡು ಮೀಟರ್ ಆಳಕ್ಕೆ ಮಣ್ಣು ತೆಗೆಯಲಾಗುತ್ತಿದೆ. ಇನಷ್ಟು ಸ್ಮಾರಕಗಳ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ಇರುವ ಸಾಲು ಮಂಟಪಗಳ ಜೀಣೋದ್ಧಾರ ಕಾರ್ಯ ನಡೆಯುತ್ತಿದೆ. ಪುರಾತನ ಕಾಲದ 8 ಬಾವಿಗಳು ಕಂಡು ಬಂದಿವೆ. ಅದರಲ್ಲಿ ಒಂದರ ಮಣ್ಣು ತೆರವು ಮಾಡಲಾಗಿದೆ. ಕೆಳಗಡೆ ಬಂಡೆಬಂದು ನೀರು ಕಾಣಿಸಿಕೊಂಡಿದೆ. ಉಳಿದ ಬಾವಿಗಳ ಮಣ್ಣು ತೆರವು ಕಾರ್ಯ ನಡೆದಿದೆ. ಎಚ್.ರವೀಂದ್ರ, ಸಹಾಯಕ ಸಂರಕ್ಷಣಾಧಿಕಾರಿ, ಕೇಂದ್ರ ಪುರಾತತ್ವ ಇಲಾಖೆ, ಹಂಪಿ