

ಮಂಡ್ಯ: ತಾಲೂಕಿನ ಹಂಪಾಪುರದ ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕ ವೃತ್ತಿಯನ್ನು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಗಂಗಾಮತಸ್ಥರ ಸುಪರ್ದಿಗೆ ವಹಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಉಪ್ಪರಕನಹಳ್ಳಿ ಗ್ರಾಮ ಪಂ ಚಾಯಿತಿ ಸದಸ್ಯ ಸತೀಶ್ ಒತ್ತಾಯಿಸಿದರು.
ದೇವಾಲಯವು ಹಂಪಾಪುರಕ್ಕೆ ಗ್ರಾಮಕ್ಕೆ ಸೇರಿದ್ದಾಗಿದ್ದು, ಇಲ್ಲಿ ಪೂಜೆ ಸಲ್ಲಿಸುವುದು 60 ವರ್ಷದಿಂದ ಗ್ರಾಮದವರಿಗೆ ಸೇರಿತ್ತು. ಈಗ ಏಕಾಏಕಿ ಮುಜರಾಯಿ ಇಲಾಖೆ ಮಧ್ಯೆಪ್ರವೇಶದಿಂದಾಗಿ ತಹಸೀಲ್ದಾರರು ಹಳೇ ಅರ್ಚಕರು ಪೂಜೆ ಸಲ್ಲಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಪಟ್ಟಲದಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎನ್ನಲಾಗುತ್ತಿದೆ. ಆದರೆ ಇದುವರೆಗೂ ಮುಜರಾಯಿ ಇಲಾಖೆಯಿಂದ ದೇವಾಲಯದ ಯಾವುದೇ ಕಾರ್ಯಕ್ರಮ ಅಥವಾ ಅಭಿವೃದ್ಧಿ ಕೆಲಸ ನೆರವೇರಿಸಿಲ್ಲ. ಆದರೂ ಇದೀಗ ಅವರ ಮಧ್ಯಸ್ಥಿಕೆಯಿಂದ ನೆರೆ ಗ್ರಾಮ ಹಬ್ಬದಮಾರನಹಳ್ಳಿಯ ಗ್ರಾಮಸ್ಥರನ್ನು ಅರ್ಚಕರಾಗಿ ನೇಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1904ರಿಂದಲೂ ದೇವಾಲಯವು ಹಂಪಾಪುರದ ಪಟ್ಟಲದಮ್ಮ ಎಂಬ ದಾಖಲೆಗಳಿದ್ದು, ಈಗ ಏಕಾಏಕಿ ಕಳೆದೊಂದು ತಿಂಗಳಲ್ಲಿ ಚೋಕನಹಳ್ಳಿ ಪಟ್ಟಲದಮ್ಮ ಎಂಬುದಾಗಿ ದಾಖಲೆ ಸೃಷ್ಠಿಸಲಾಗಿದೆ. ಇದನ್ನು ಸರಿಪಡಿಸಿ ಮೊದಲಿನಂತೆಯೇ ಹಂಪಾಪುರದ ಪಟ್ಟಲದಮ್ಮ ಎಂದು ಬದಲಿಸಬೇಕು. ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದು, ಅಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಆದರೆ ಅರ್ಚಕ ಸೇವೆಯನ್ನು ಹಂಪಾಪುರದ ಗ್ರಾಮಕ್ಕೆ ನೀಡಿ, ದೇವಾಲಯದ ಹೆಸರಿನಲ್ಲಿರುವ 7 ಎಕರೆ ಜಮೀನನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಬೇಕು. ದೇವಾಲಯದ ಹುಂಡಿ ಹಣ ಎಣಿಕೆ ಮಾಡಿ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಗಂಗಾಮತಸ್ಥ ಸಂಘದ ಉಪಾಧ್ಯಕ್ಷ ಕೆ.ತಮ್ಮಣ್ಣ, ಮಹಿಳಾಧ್ಯಕ್ಷೆ ಗಾಯತ್ರಿ, ಕೃಷ್ಣಯ್ಯ, ಬೋರಯ್ಯ, ದೇವಣ್ಣ, ಉಮೇಶ್ ಇದ್ದರು.