ಹಂಪನಕಟ್ಟೆ ಸಂಚಾರ ಬದಲಾವಣೆ?

hAMPANAKATTE NEW
Published on

ಮಂಗಳೂರು: ನಗರದ ಪ್ರಮುಖ ಜಂಕ್ಷನ್ ಹಂಪನಕಟ್ಟೆಯಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಶೀಘ್ರ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಆದರೆ ರಸ್ತೆ ಅಗಲವಾದ ಬಳಿಕವೂ ಹಂಪನಕಟ್ಟೆಯಲ್ಲಿ ಸುತ್ತುಬಳಸಿ ಸಾಗಬೇಕೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

7-8 ವರ್ಷದ ಮುಂಚೆ ಹಂಪನಕಟ್ಟೆ ಜಂಕ್ಷನ್‌ನಲ್ಲಿರುವ ಸಿಗ್ನಲ್ ನಗರದ ಅತೀ ದೊಡ್ಡ ಟ್ರಾಫಿಕ್ ಸಿಗ್ನಲ್ ಆಗಿತ್ತು. ಆದರೆ ಆ ಬಳಿಕ ವಾಹನ ದಟ್ಟಣೆ ಹೆಚ್ಚಾಗುತ್ತದೆ ಎನ್ನ್ನುವ ಕಾರಣಕ್ಕೆ ಸಿಗ್ನಲ್ ವ್ಯವಸ್ಥೆ ಸ್ಥಗಿತಗೊಳಿಸಿ, ಸಂಚಾರದಲ್ಲಿ ಬದಲಾವಣೆ ತರಲಾಗಿತ್ತು. ಪ್ರಸ್ತುತ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿಂದಿನ ದಿನದ ವರೆಗೂ ಹಂಪನಕಟ್ಟೆಯಲ್ಲಿ ಸಿಗ್ನಲ್ ವ್ಯವಸ್ಥೆ ಇರಲಿಲ್ಲ.

ಸ್ಟೇಟ್ ಬ್ಯಾಂಕ್‌ನಿಂದ ಫಳ್ನೀರ್ ಕಡೆಗೆ ಹೋಗುವ ವಾಹನಗಳು ಬಾವುಟಗುಡ್ಡೆ ಸಿಂಡಿಕೇಟ್ ಬ್ಯಾಂಕ್(ಕೆನರಾ ಬ್ಯಾಂಕ್) ವರೆಗೆ ಹೋಗಿ ಬಲಕ್ಕೆ ತಿರುಗಿ ಸ್ಟೇಟ್ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಬೇಕು. ಹಂಪನಕಟ್ಟೆಯಿಂದ ಕೆಎಸ್‌ರಾವ್ ರಸ್ತೆಗೆ ಪ್ರವೇಶಿಸಬೇಕಾದರೆ, ಕ್ಲಾಕ್‌ಟವರ್‌ವರೆಗೆ ಸಾಗಿ ಅಲ್ಲಿಂದ ಬಲಕ್ಕೆ ತಿರುಗಿ ಹಂಪನಕಟ್ಟೆ ಜಂಕ್ಷನ್‌ನತ್ತ ಬರಬೇಕಿತ್ತು. ಇದರಿಂದ ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿತ್ತು.

ಪ್ರಸ್ತುತ ಕಾಂಕ್ರೀಟ್ ಕಾಮಗಾರಿಯಿಂದ ರಸ್ತೆ ಅಗಲವಾಗುತ್ತಿದೆ. ಜಂಕ್ಷನ್‌ನಲ್ಲಿ ನೇರ ಸಂಚಾರಕ್ಕೆ ತಡೆಯೊಡ್ಡಿ ಬ್ಯಾರಿಕೇಡ್‌ಗಳನ್ನು ಹಾಕುವುದರ ಬದಲು ಈ ಮೊದಲು ಇದ್ದಂತೆ ಸಿಗ್ನಲ್ ಅಳವಡಿಕೆ ಮೂಲಕ ನೇರ ಸಂಚಾರಕ್ಕೆ ಅವಕಾಶ ನೀಡುವುದು ಉತ್ತಮ. ತುರ್ತು ಆಂಬುಲೆನ್ಸ್‌ಗಳ ಸಂಚಾರಕ್ಕೂ ಇದರಿಂದ ಅನುಕೂಲವಾಗಲಿದೆ. ಜತೆಗೆ ಬಾವುಟಗುಡ್ಡೆ, ಕ್ಲಾಕ್‌ಟವರ್ ಬಳಿ ಉಂಟಾಗುವ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ ಎನ್ನುವ ಅಭಿಪ್ರಾಯವಿದೆ.

ಫ್ರೀ ಲೆಫ್ಟ್‌ಗೆ ಅವಕಾಶ: ಹಂಪನಕಟ್ಟೆ ನಾಲ್ಕು ಪ್ರಮುಖ ರಸ್ತೆ ಸಂದಿಸುವ ಪ್ರದೇಶವಾಗಿರುವುದರಿಂದ ಸಿಗ್ನಲ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದೆ. ನಗರದ ಎಲ್ಲ ಜಂಕ್ಷನ್‌ಗಳಲ್ಲಿ ಇರುವಂತೆ ಇಲ್ಲೂ ಫ್ರೀ ಲೆಫ್ಟ್ ನಿಯಮ ಅನುಸರಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಪ್ರಸ್ತುತ ರಸ್ತೆ ಕಾಮಗಾರಿ ನಡೆಯುತ್ತಿರುವಂತೆ ಎಲ್ಲ ರಸ್ತೆಗಳಲ್ಲಿ ಸಿಗ್ನಲ್‌ಲೈಟ್ ಕಂಬ ಅಳವಡಿಸಲಾಗುತ್ತಿದೆ. ಒಂದು ತಿಂಗಳೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ, ಬಳಿಕ ವಾಹನ ಸಂಚಾರ ಯಾವ ರೀತಿ ಇರುತ್ತದೆ ಎನ್ನುವುದನ್ನು ಅವಲಂಬಿಸಿ ಸಿಗ್ನಲ್ ಬಳಕೆ ಮಾಡಲಾಗುವುದು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ರಸ್ತೆ ವಿಸ್ತರಣೆ ಕಾಮಗಾರಿ ಮುಗಿದ ಬಳಿಕ ಹಂಪನಕಟ್ಟೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೆಲವೊಂದು ಮಾನದಂಡ ಅನುಸರಿಸಿ ಪೊಲೀಸ್ ಇಲಾಖೆ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು.

ವೇದವ್ಯಾಸ ಕಾಮತ್, ಶಾಸಕರು

ಇತರ ಜಂಕ್ಷನ್‌ಗಳಲ್ಲಿ ಇರುವಂತೆ ಹಂಪನಕಟ್ಟೆಯಲ್ಲೂ ಎಡಗಡೆ ಸಂಚರಿಸುವರು ನೇರವಾಗಿ ಸಂಚರಿಸಲು (ಫ್ರೀ ಲೆಫ್ಟ್) ಅನುಕೂಲ ಮಾಡಿಕೊಡಲಾಗುವುದು. ಕೆ.ಎಸ್.ರಾವ್ ರಸ್ತೆಗೆ ತಿರುಗುವಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು. ಸಂಪೂರ್ಣ ಸಿಗ್ನಲ್ ವ್ಯವಸ್ಥೆ ಮಾಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಎಂ.ಎ.ನಟರಾಜ್, ಎಸಿಪಿ ಸಂಚಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net