

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಕೊಡುವ ಉದ್ಘಾಟಕರ ಭಾಗ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿಸಿದೆ. ಈ ನಡುವೆ, ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ ಹಂ.ಪ.ನಾಗರಾಜಯ್ಯ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೆಸರು ಸಹ ಚರ್ಚೆಯಲ್ಲಿದೆ. ಈ ಪೈಕಿ ಹಂಪನಾ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ. ಅಂತಿಮ ಕ್ಷಣದಲ್ಲಿ ಬದಲಾದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ದಸರಾ ಉದ್ಘಾಟಕರನ್ನು ಆಯ್ಕೆ ಮಾಡುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನಕ್ಕೆ ಬಿಡಲಾಗಿದೆ. ಅವರು ಯಾರನ್ನು ಆಯ್ಕೆ ಮಾಡುತ್ತಾರೋ ಅವರಿಗೆ ಸರ್ಕಾರದ ಪರವಾಗಿ ಆಮಂತ್ರಣ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
2013ರಿಂದ 2018ರವರೆಗೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತ್ಯ ವಲಯದ ಗಣ್ಯರಿಗೆ ಅವಕಾಶ ಕಲ್ಪಿಸಿದ್ದರು. ಅದೇ ರೀತಿ ಕಳೆದ ವರ್ಷ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಆಯ್ಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಲ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.
ಹಿರಿಯ ವಿದ್ವಾಂಸರೊಬ್ಬರ ಆಯ್ಕೆಗೆ ಸಿಎಂ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಪನಾ ಅವರಿಗೆ ಕರೆಸಿದರೆ ಹೇಗೆ ಎಂದು ಆಪ್ತರ ನಡುವೆ ಚರ್ಚೆಯನ್ನೂ ಮಾಡಿದ್ದಾರೆ. ಜೈನ ಸಮುದಾಯದವರಾದ ಇವರ ಆಯ್ಕೆಯಿಂದ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗಲಿದೆ ಎಂಬ ಆಲೋಚನೆ ಇದೆ. ಆದರೆ, ಇದು ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.
2023ರ ದಸರಾ ಉದ್ಘಾಟನೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸುವಂತೆ ಶಾಸಕ ಟಿ.ಎಸ್.ಶ್ರೀವತ್ಸ ಪ್ರಸ್ತಾಪ ಮಾಡಿದ್ದರು. ಈ ಬಾರಿಯೂ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮತ್ತೊಮ್ಮೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸುವಂತೆ ಪ್ರಸ್ತಾಪ ಮಾಡಲಾಗಿದೆ. ಆದರೆ, ಆಯ್ಕೆಯ ಹೊಣೆಯನ್ನು ದಸರಾ ಉನ್ನತ ಮಟ್ಟದ ಸಮಿತಿಯು ಸಿಎಂ ವಿವೇಚನೆಗೆ ಬಿಟ್ಟಿದೆ. ಆದ್ದರಿಂದ 2024ರ ದಸರಾ ಉದ್ಘಾಟಕರು ಯಾರೆಂಬ ಕುತೂಹಲ ಲಕ್ಷಾಂತರ ಜನರಲ್ಲಿ ಮನೆ ಮಾಡಿದೆ.
ನಾಡ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಅಕ್ಟೋಬರ್ 3ರಂದು ಬೆಳಗ್ಗೆ 9.15ರಿಂದ 9.45ರ ಒಳಗೆ ಉದ್ಘಾಟಕರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರೆಗೆ ಚಾಲನೆ ನೀಡುವ ಮೂಲಕ ನಾಡಹಬ್ಬ ಶುರುವಾಗಲಿದೆ. ಹೀಗಾಗಿ, ದಸರಾ ಉದ್ಘಾಟಕರು ಅತಿ ಮುಖ್ಯವಾಗಿರುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ‘ಹಂಪನಾ’ ಕಾವ್ಯನಾಮದಿಂದ ಹೆಸರುವಾಸಿಯಾಗಿದ್ದಾರೆ. ಇವರು ಜೈನ ಸಮುದಾಯದವರು. ಮೂಲತಃ ಗೌರಿಬಿದನೂರು ತಾಲೂಕಿನ ಹಂಪಸಂದ್ರದವರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪಡೆದರು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಮಂಡ್ಯ, ದಾವಣಗೆರೆ, ಶಿವಮೊಗ್ಗ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದರು. ಸೆಂಟ್ರಲ್ ಕಾಲೇಜಿಗೆ ಸೇರಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಗ್ರಂಥ ಸಂಪಾದಕ, ಉತ್ತಮ ವಾಗ್ಮಿ ಆಗಿರುವ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಅಧ್ಯಕ್ಷರಾಗಿದ್ದರು.