

ದಾವಣಗೆರೆ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ತಮಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಎಪಿಎಂಸಿ ಹಮಾಲಿ ಕಾರ್ಮಿಕರು ಬುಧವಾರ ಕೆಲಸ ನಿಲ್ಲಿಸಿ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಅಸಂಘಟಿತ ಕಾರ್ಮಿಕರಿಗೆ ಸಿಎಂ ಆರ್ಥಿಕ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಜೀವನ ನೆಡೆಸುತ್ತಿರುವ ತಾವು ಉದ್ಯೋಗ ಕಳೆದುಕೊಂಡು ಹಸಿವಿನಿಂದ ಬಳಲುವಂತಾಗಿದೆ. ಶ್ರಮಜೀವಿಗಳನ್ನು ನಿರ್ಲಕ್ಷಿಸಲಾಗಿದೆ. ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ ಎಂದು ದೂರಿದರು.
ತಮಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಬೇಕು. ಮೂರು ತಿಂಗಳಿಗೆ ಆಗುವಷ್ಟು ಆಹಾರಧಾನ್ಯಗಳ ಕಿಟ್ ಕೊಡಬೇಕು. ತಮ್ಮನ್ನು ಕೋವಿಡ್-19 ವಾರಿಯರ್ಸ್ ಎಂದು ಪರಿಗಣಿಸಿ ವಿಮೆ ಜಾರಿ ಮಾಡಬೇಕು. ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು. ಬೇರೆ ರಾಜ್ಯಗಳಿಂದ ಮಾರುಕಟ್ಟೆಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.
ಬಳಿಕ ಎಪಿಎಂಸಿ ಕಾರ್ಯದರ್ಶಿ ಪ್ರಭು ಮೂಲಕ ಸಿಎಂಗೆ ಮನವಿ ಪತ್ರ ರವಾನಿಸಿದರು. ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು, ಹಮಾಲಿ ಸಂಘದ ಕಾರ್ಯದರ್ಶಿ ಮಂಜುನಾಥ, ವೆಂಕಟೇಶ್, ಹನುಮಂತ ನಾಯ್ಕ, ಹಾಲೇಶನಾಯ್ಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.