ಮಕ್ಕಳ ಶಿಕ್ಷಣದಲ್ಲಿ ಹ್ಯಾಮ್ ತಂತ್ರಜ್ಞಾನ ಉಪಯುಕ್ತ

Ham
Published on

ಲಕ್ಷ್ಮೇಶ್ವರ: ಹ್ಯಾಮ್ ಎಂಬುದು ರೇಡಿಯೋ ಆಧಾರಿತ ಸಂಪರ್ಕ ತಂತ್ರಜ್ಞಾನವಾಗಿದೆ. ಭೂಕಂಪ, ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸಂಪರ್ಕ ಸಾಧನಗಳು ಕಾರ್ಯನಿರ್ವಹಿಸದಿದ್ದರೆ ಹ್ಯಾಮ್‌ಗಳು ನಿರ್ದಿಷ್ಟ ತರಂಗಾಂತರದಲ್ಲಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ ಎಂದು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಹ್ಯಾಮ್ಸ್ (ಐಐಎಚ್) ನಿರ್ದೇಶಕ ಡಾ. ಎಸ್. ಸತ್ಯಪಾಲ್ ಹೇಳಿದರು.

ಸಮೀಪದ ಒಡೆಯರ ಮಲ್ಲಾಪುರ ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಹ್ಯಾಮ್ ತಂತ್ರಜ್ಞಾನದ ಬಗ್ಗೆ ಸೋಮವಾರ ತಿಳಿಸಿಕೊಟ್ಟರು. ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಪರವಾನಗಿಯೊಂದಿಗೆ ರಾಜ್ಯ ಸರ್ಕಾರದ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಹ್ಯಾಮ್ ಬಳಸಲು ಮೊದಲಿಗೆ ಲೈಸೆನ್ಸ್ ಪಡೆಯಬೇಕಾಗುತ್ತದೆ. ಲೈಸೆನ್ಸ್ ಪಡೆದವರಿಗೆ ಕೋಡ್‌ವರ್ಡ್ ನೀಡಲಾಗುವುದು. ಈ ಕೋಡ್‌ವರ್ಡ್ ಮೂಲಕ ಇತರ ದೇಶಗಳಲ್ಲಿರುವ ಸಾಧಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಅಗತ್ಯ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಸಂಬಂಧಿತ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಮಕ್ಕಳ ಶಿಕ್ಷಣದಲ್ಲಿ ಹ್ಯಾಮ್ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವಿಭಾಗದ ಹಿರಿಯ ಇಂಜಿನಿಯರ್ ಮಹಾದೇವ ಮಾತನಾಡಿ, ಹ್ಯಾಮ್ ತಂತ್ರಜ್ಞಾನದ ಬಳಕೆಯಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ವಸತಿ ಶಾಲೆಗಳಲ್ಲಿ ಹ್ಯಾಮ್ ಅಳವಡಿಸಲಾಗುತ್ತಿದೆ ಎಂದರು.

ವಿಜ್ಞಾನ ಶಿಕ್ಷಕಿ ಎಂ.ಐ. ಡಂಬಳ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಬಳಸುವಂತಹ 6 ವಾಕಿಟಾಕಿಗಳುಳ್ಳ ಹ್ಯಾಮ್ ತಂತ್ರಜ್ಞಾನದ ಉಪಕರಣ ನಮ್ಮ ಶಾಲೆಯಲ್ಲಿ ಅಳವಡಿಸಿರುವುದು ಸಂತಸ ತಂದಿದೆ ಎಂದರು. ಐಐಎಚ್ ಜಂಟಿ ನಿರ್ದೇಶಕ ವೆಂಕಟ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net