ಹಾಲಪುರ ಶಾಲೆ ಕಾಂಪೌಂಡ್ ದುರಸ್ತಿಗೊಳಿಸಿ

31.ktal.01
ಹಾಲಪುರ ಸರ್ಕಾರಿ ಪ್ರೌಢಶಾಲೆ ಹೊರನೋಟ.
Published on

ಕವಿತಾಳ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗಿದೆ. ಆದರೆ, ಹಾಲಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುವ ಹತ್ತನೇ ತರಗತಿ ಪರೀಕ್ಷೆ ಬಗ್ಗೆ ಚಿಂತೆ ಕಾಡಿದೆ. ಈ ಸಲ ಸುಸೂತ್ರವಾಗಿ ಎಕ್ಸಾಂ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕಳೆದ ವರ್ಷ ಹತ್ತನೇ ತರಗತಿ ಪರೀಕ್ಷೆ ವೇಳೆ ಕೆಲ ಪುಂಡರು ಕಾಂಪೌಂಡ್ ಹಾರಿ, ಶಾಲಾವಾರಣದಲ್ಲಿ ನುಗ್ಗಿ ನಕಲು ಸರಬರಾಜು ಮಾಡಲು ಪ್ರಯತ್ನಿಸಿದ್ದರು. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅಧಿಕಾರಿಗಳು ಶಾಲೆ ಹಿಂದಿನ ಕಾಂಪೌಂಡ್ ಸರಿಪಡಿಸಿದ್ದಾರೆ.

ಆದರೆ, ಶಾಲಾ ಮುಂದಿನ ಕಾಂಪೌಂಡ್ ದುರಸ್ತಿ ಮಾಡಿಲ್ಲ. ಹೀಗಾಗಿ ಪರೀಕ್ಷೆ ವೇಳೆ ನಕಲು ಪೂರೈಕೆದಾರರ ಕಾಟ ಹೆಚ್ಚಬಹುದು. ಆದ್ದರಿಂದ ಪರೀಕ್ಷೆ (ಮಾ.21) ಆರಂಭವಾಗುವುದರೊಳಗೆ ಕಾಂಪೌಂಡ್ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಮೊದಲು ಹಾಲಪುರ ವಿದ್ಯಾರ್ಥಿಗಳು ಕವಿತಾಳದ ಪರೀಕ್ಷಾ ಕೇಂದ್ರದಲ್ಲಿ ಎಕ್ಸಾಂ ಬರೆಯುತ್ತಿದ್ದರು. ಕಳೆದ ಎರಡು ವರ್ಷದಿಂದ ಗ್ರಾಮದ ಶಾಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ಹಾಲಪುರ ಶಾಲೆ, ಮುರಾರ್ಜಿ, ಅಂಬೇಡ್ಕರ್ ವಸತಿ ಶಾಲೆ, ತೋರಣದಿನ್ನಿ, ಹಿರೇದಿನ್ನಿ ಕ್ಯಾಂಪ್, ಇರಕಲ್ ಮಠದ ಖಾಸಗಿ ಶಾಲೆಗಳು ಸೇರಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಶಾಲೆಯ ಹಿಂದೆ ತುಂಗಭದ್ರಾ ಎಡದಂಡೆ ಮುಖ್ಯನಾಲೆಯಿದ್ದು, ಅದರ ಪಕ್ಕದಲ್ಲಿ ಕುಳಿತು ಕಿಡಿಗೇಡಿಗಳು ಚೀಟಿ ಬರೆಯುತ್ತಾರೆ. ಆದ್ದರಿಂದ ಪರೀಕ್ಷೆ ಸಮಯದಲ್ಲಿ ಅಲ್ಲಿ ಯಾರು ಇರದಂತೆ ನೋಡಿಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಾಳಿಂಗರಾಯ ಪೂಜಾರಿ, ಗ್ರಾಪಂ ಸದಸ್ಯ ಚಂದಪ್ಪ, ಗ್ರಾಮಸ್ಥರಾದ ಸಿದ್ದಾರ್ಥ ಪಾಟೀಲ್, ರಾಮಣ್ಣ ಜಂಗಮರಹಳ್ಳಿ ಒತ್ತಾಯಿಸಿದ್ದಾರೆ.

ಬಿಇಒ, ಮಾನ್ವಿ ಚಂದ್ರಶೇಖರ ದೊಡ್ಡಮನಿಹಾಲಪುರ ಸರ್ಕಾರಿ ಶಾಲೆಯಲ್ಲಿ ಈವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಈ ಸಲ ಇಲಾಖೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಶೀಘ್ರವೇ ಶಾಲಾ ಕಾಂಪೌಂಡ್ ದುರಸ್ತಿಗೊಳಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net