

ಮಾಂಜರಿ/ಬೋರಗಾಂವ: ನಗರ ಪ್ರದೇಶಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಸರ್ಕಾರ, ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಬಸ್ ತಂಗುದಾಣಗಳನ್ನು ನಿರ್ಮಿಸಲು ಅನುದಾನ ನೀಡುತ್ತದೆ. ಹೀಗೆ ಗ್ರಾಮೀಣ ಭಾಗದಲ್ಲಿ ನಿರ್ಮಿಸಲ್ಪಡುವ ತಂಗುದಾಣ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಆ ತಂಗುದಾಣಗಳಲ್ಲಿ ವಿಶ್ರಮಿಸಲು ಸಾರ್ವಜನಿಕರು ಭಯಪಡುತ್ತಿದ್ದಾರೆ.
ಅವಸಾನದ ಹಂತಕ್ಕೆ: ನಿಪ್ಪಾಣಿ ತಾಲೂಕಿನ ಗಡಿಭಾಗದ ವಿವಿಧೆಡೆ ಬಸ್ ತಂಗುದಾಣಗಳು ಕುಸಿದು ಬೀಳುವ ಹಂತದಲ್ಲಿವೆ. ಕೆಲವೊಂದು ಬಸ್ ತಂಗುದಾಣಗಳು ನೆಲಸಮವಾಗಿವೆ. ಗಳತಗಾ-ಭೋಜ ಕ್ರಾಸ್, ಕಸನಾಳ, ಬೋರಗಾಂವವಾಡಿ, ಢೋಣೆವಾಡಿ, ಭೀಮಾಪುರವಾಡಿ, ಗಳತಗಾ, ಚಿಂಚಣಿ, ಗಿರಗಾಂವ, ಶಿರಗಾಂವ, ಶಿರಗಾಂವವಾಡಿ, ನಾಗಝರಿ ಮಠ, ಜನವಾಡ ಕ್ರಾಸ್ ಮತ್ತು ನೇಜ ಕ್ರಾಸ್, ಸಿದ್ದಾಪುರವಾಡಿ ಸೇರಿ ಕೆಲ ಬಸ್ ತಂಗುದಾಣಗಳು ಹಾಳಾಗಿವೆ. ಒಳಗಡೆ ಪ್ರಯಾಣಿಕರು ನಿಲ್ಲಲು ಹೆದರುತ್ತಿದ್ದಾರೆ. ಕೆಲವೊಂದು ಕಡೆ ಕೂಡು ರಸ್ತೆಗಳಲ್ಲಿ ತಂಗುದಾಣಗಳು ಇಲ್ಲದ ಕಾರಣ ಹತ್ತಿರದ ಗಿಡಗಳೇ ಪ್ರಯಾಣಿಕರಿಗೆ ಆಶ್ರಯವಾಗಿವೆ. ಕೆಲವೆಡೆ ಮಂದಿರ, ಹೋಟೆಲ್‌ಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಕೆಲವೆಡೆ ಇಲ್ಲ ತಂಗುದಾಣ: ಗ್ರಾಮೀಣ ಭಾಗದಲ್ಲಿರುವ ಕೆಲ ಗ್ರಾಮಗಳಲ್ಲಿ ಬಸ್ ತಂಗುದಾಣ ಕುಸಿಯುವ ಹಂತದಲ್ಲಿದ್ದರೆ ಇನ್ನು ಕೆಲವೆಡೆ ತಂಗುದಾಣಗಳೇ ಇಲ್ಲ. ಗಡಿಭಾಗದ ಕಾರದಗಾ, ಗಳತಗಾ, ಖಡಕಲಾಟ ಗ್ರಾಮಗಳಲ್ಲಿ ಬಸ್ ತಂಗುದಾಣಗಳಿಲ್ಲದೇ ಪ್ರಯಾಣಿಕರು ಪರದಾಡುವ ಪ್ರಸಂಗ ಬಂದೊದಗಿದೆ. ನೂತನ ಬಸ್ ತಂಗುದಾಣ ನಿರ್ಮಿಸುವಂತೆ ಹಾಗೂ ಶೀಘ್ರ ಹದೆಗೆಟ್ಟ ಬಸ್ ತಂಗುದಾಣಗಳನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕುಡುಕರ ಅಡ್ಡೆ: ಕರೊನಾ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಸಾರಾಯಿ ಕುಡಿಯಲು ಅನುಮತಿ ಇಲ್ಲ. ಅಂಗಡಿ ಮಾಲೀಕರಿಗೆ ಪಾರ್ಸೆಲ್ ನೀಡಲು ಮಾತ್ರ ಅನುಮತಿ ನೀಡಿದ್ದರಿಂದ ಮದ್ಯ ವ್ಯಸನಿಗಳಿಗೆ ಬಸ್ ತಂಗುದಾಣಗಳೇ ಬಾರ್ ಆದಂತಾಗಿವೆ. ಬೆಳಗ್ಗೆ ನೋಡಿದರೆ ಸಾರಾಯಿ ಪ್ಯಾಕೆಟ್‌ಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು, ನೀರಿನ ಬಾಟಲ್‌ಗಳು ಸಾರ್ವಜನಿಕರ ಕಣ್ಣಿಗೆ ರಾಚುತ್ತವೆ. ರಾಜ್ಯ ಸಾರಿಗೆ ಸಂಸ್ಥೆಯು ಪ್ರತಿಯೊಂದು ಗ್ರಾಮಗಳಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಲು ಮುಂದಾಗಬೇಕು. ಈಗಿರುವ ಬಸ್ ತಂಗುದಾಣಗಳನ್ನು ಸ್ವಚ್ಛತೆಯಿಂದಿಡಬೇಕು. ಕಡ್ಡಾಯವಾಗಿ ಶೌಚಗೃಹ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟು ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಕೆಲ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ಸರ್ಕಾರದಿಂದ ಅನುದಾನವೂ ಮಂಜೂರಾಗಿದೆ. ತಾಪಂ ಸದಸ್ಯರ ಗಮನಕ್ಕೆ ತಂದು ತಂಗುದಾಣ ರಿಪೇರಿ ಮಾಡುವ ಜತೆಗೆ ಹೊಸ ತಂಗುದಾಣ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗುವುದು.| ಕೆ.ಎಸ್.ಪಾಟೀಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕೋಡಿ
| ಸಂತೋಷಕುಮಾರ ಕಾಮತ್/ಸುಯೋಗ ಕಿಲ್ಲೇದಾರ ಮಾಂಜರಿ/ಬೋರಗಾಂವ