

ಹಳ್ಳಿಹೊಳೆ: ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮದ ಅಂತರ್ಜಾಲ ಸಮಸ್ಯೆಗೆ ಉತ್ಸಾಹಿ ಯುವಕರ ತಂಡ ಊರವರ ಸಹಕಾರದಿಂದ ಉತ್ತರ ಕಂಡುಕೊಂಡಿದ್ದು, ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ತರಗತಿಗೆ ಜೀವ ತಂದಿದ್ದಾರೆ. 100 ಜನರಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಸೂಪರ್‌ಫಾಸ್ಟ್ ಅಂತರ್ಜಾಲ ಸಿಕ್ಕಿದೆ.
ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಏರ್ ಫೈಬರ್ ಅಳವಡಿಕೆ ನಿರ್ಧಾರಕ್ಕೆ ಬರಲಾಯಿತು. ಏರ್ ಫೈಬರ್ ಅಳವಡಿಕೆಗೆ ಬೇಕಾದಷ್ಟು ಗ್ರಾಹಕರು, ಹಣಕಾಸಿನ ಸಮಸ್ಯೆ ಎದುರಾದಾಗ ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಕೃಷ್ಣಾನಂದ ಚಾತ್ರ ಮೊದಲು ಸಂಪರ್ಕಕ್ಕೆ ಮುನ್ನುಡಿ ಬರೆದರು. ಇವರಿಂದ ಸ್ಫೂರ್ತಿ ಪಡೆದು ಮತ್ತಷ್ಟು ಜನ ಮುಂದೆ ಬಂದರು. ಹಳ್ಳಿಹೊಳೆ ಗ್ರಾಪಂ ಮಾಜಿ ಸದಸ್ಯ ದಿನೇಶ್ ಯಡಿಯಾಳ, ಊರಿನ ಪ್ರಮುಖರಾದ ಶಿವರಾಮ ಪೂಜಾರಿ, ಮುರಳಿ ಎಡಿಯಾಳ, ಟೆಕ್ನೀಶಿಯನ್ ಜಗದೀಶ್, ಶ್ರೀಹರ್ಷ ಯಡಿಯಾಳ ನೀಡಿದ ಪ್ರೋತ್ಸಾಹದಿಂದ ಏರ್ ಫೈಬರ್ ಅಳವಡಿಕೆ ಸಾಧ್ಯವಾಯಿತು. ಯುವಕರು ಸಮಸ್ಯೆ ಎದುರಿಸಲು ಪ್ರಯತ್ನಿಸಿದರೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಏರ್ ಫೈಬರ್ ಸಾಕ್ಷಿ.
ಸಂಪರ್ಕ ಪಡೆದ ಮೂರನೇ ಪ್ರದೇಶ
ಕೇಂದ್ರ ಸರ್ಕಾರ ಭಾರತ್ ಏರ್ ಫೈಬರ್ ಮೂಲಕ ಹೈ ಸ್ಪೀಡ್ ನೆಟ್‌ವರ್ಕ್ ಸಂಪರ್ಕ ಪಡೆಯುವ ವ್ಯವಸ್ಥೆಯಲ್ಲಿ ಏರ್ ಸಿಸ್ಟಮ್ ಅಳವಡಿಸಿಕೊಂಡ ಮೂರನೇ ಪ್ರದೇಶ ಹಳ್ಳಿಹೊಳೆ. ಸುಳ್ಯದ ದೊಡ್ಡತೋಟ, ಕೊಡಗಿನ ಮಡಿಕೇರಿ ಮೊದಲು ಸಂಪರ್ಕ ಪಡೆದ ಪ್ರದೇಶಗಳು. ಏರ್‌ನೆಟ್ ವರ್ಕ್‌ಗೆ ಕೇಬಲ್, ಬ್ರಾಡ್‌ಬಾಂಡ್, ಒಎಫ್‌ಸಿ ಅಗತ್ಯವಿಲ್ಲ. ಲೈನ್ ಆಫ್ ಸೈಟ್ ಕಾನ್ಸೆಪ್ಟ್ ಮೂಲಕ ಸಂಪರ್ಕ ಪಡೆಯುವ ವಿಧಾನ ಇದು. (ಕಣ್ಣಿನ ದೃಷ್ಟಿಯಲ್ಲಿ ಟವರ್ ಕಾಣಿಸಬೇಕು). ಕೆಲವು ಕಡೆ ಲೈನ್ ಆಫ್ ಸೈಟ್ ಇಲ್ಲದ ಕಾರಣ ಸಿಗ್ನಲ್ ಸಿಕ್ಕಲ್ಲಿ ರಿಪೀಟ್ ಆಫ್ ಪ್ರೊಜೆಕ್ಟ್ ಮೂಲಕ ಸಂಪರ್ಕ ಪಡೆಯಲಾಗುತ್ತದೆ.
ವಿಜಯವಾಣಿ ಸರಣಿ ವರದಿ
ಹಳ್ಳಿಹೊಳೆ ಗ್ರಾಮ ವ್ಯಾಪ್ತಿಯ ಅಂತರ್ಜಾಲ ಸಂಪರ್ಕ, ಮೊಬೈಲ್ ಟವರ್, ಸ್ಥಿರ ದೂರವಾಣಿ ಕುರಿತು ವಿಜಯವಾಣಿ ಸರಣಿ ವರದಿ ಮಾಡಿತ್ತು. ಶೆಟ್ಟಿಬೆಟ್ಟು, ಹಳ್ಳಿಹೊಳೆ, ಕಮಲಶಿಲೆ, ಕಬ್ಬಿನಾಲೆ ಪರಿಸರದಲ್ಲಿ ವಿದ್ಯುತ್ ಕೈಕೊಟ್ಟರೆ ನೆಟ್‌ವರ್ಕ್ ಕೈಕೊಡುತ್ತಿತ್ತು. ಕರೊನಾದಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಯುವಕರು, ವಿದ್ಯಾರ್ಥಿಗಳು ಅಂತರ್ಜಾಲ ಸಂಪರ್ಕಕ್ಕೆ ಬೆಟ್ಟ ಹತ್ತುತ್ತಿತ್ತಿದ್ದರು. ಕಮಲಶಿಲೆ ದೇವಸ್ಥಾನ ಬಳಿ ಅಲ್ಪಸ್ವಲ್ಪ ನೆಟ್‌ವರ್ಕ್ ಸಿಕ್ಕಿದ್ದರಿಂದ ವಿದ್ಯಾರ್ಥಿಗಳು, ಯುವಕರು ಬುತ್ತಿ ತಂದು ದೇವಸ್ಥಾನದ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡುತ್ತಿದ್ದರು.
ಹಳ್ಳಿಹೊಳೆ ನೆಟ್‌ವರ್ಕ್ ಡೆಡ್ ಜೋನ್ ಆಗಿದ್ದು, 2020ರಲ್ಲಿ ಕೇಂದ್ರ ಸರ್ಕಾರ ಭಾರತ್ ಏರ್ ಫೈಬರ್ ಲಾಂಚ್ ಮಾಡಿದೆ. ಏರ್ ಫೈಬರ್ ಉದ್ದೇಶಕ್ಕಾಗಿ ಕುಂದಾಪುರ ಎಜಿಎಂ ರಾಮಚಂದ್ರ ಅವರು ಸಂಪರ್ಕಿಸಿದಾಗ ಒಂದು ತಿಂಗಳೊಳಗೆ ಹಸಿರು ನಿಶಾನೆ ನೀಡಿದರು. ಊರ ಮುಖಂಡರ ಸಹಕಾರದಲ್ಲಿ ಇಂಟರ್‌ನೆಟ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಊರವರ ಸಹಕಾರ ಇಲ್ಲದಿದ್ದರೆ ಈ ಸಾಹಸ ಆಗುತ್ತಿರಲಿಲ್ಲ.
ಸಚಿನ್ ಚಾತ್ರ
ಐಬಿಎಂ ಸಾಫ್ಟ್‌ವೇರ್ ಇಂಜಿನಿಯರ್, ಹಳ್ಳಿಹೊಳೆ
ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಸುಳ್ಯದ ಫ್ರಾಂಚೈಸಿ ಪ್ರಸಾದ್ ಬಾಯರಿ ಮೂಲಕ ಏರ್ ಫೈಬರ್ ಸ್ಕೀಮ್ ತರುವ ಪ್ರಯತ್ನಕ್ಕೆ ಚಾಲನೆ ನೀಡಿದೆವು. ಅವರು ಪರಿಶೀಲಿಸಿ ಸಂಪರ್ಕಕ್ಕೆ ಬೇಕಾಗುವಷ್ಟು ಜನ ಸಿಕ್ಕರೆ ಕೆಲಸ ಮಾಡಲು ಒಪ್ಪಿದರು. ಪ್ರಸಕ್ತ ಟವರ್ ಹಾಗೂ ರಿಪೀಟರ್ ಅಳವಡಿಸಿ 23 ಜನ ಸಂಪರ್ಕ ಪಡೆದಿದ್ದು, 5 ಕಿ.ಮೀ. ವ್ಯಾಪ್ತಿಯಲ್ಲಿ ಸಂಪರ್ಕ ಸಾಧ್ಯವಾಗಿದೆ. ಊರವರು ಕನೆಕ್ಷನ್ ಮಾಡಿಕೊಳ್ಳಲು ಮುಂದೆ ಬಂದಿದ್ದರಿಂದ ಸಮಸ್ಯೆ ಪರಿಹಾರ ಆಗಿದೆ. 2 ಲಕ್ಷ ರೂ. ಖರ್ಚು ಬಂದಿದ್ದು, ಫ್ರಾಂಚೈಸಿ ಒಂದಿಷ್ಟು ಹಾಕಿದ್ದು, ಉಳಿದ ವ್ಯವಸ್ಥೆ ಊರವರು ಮಾಡಿದ್ದಾರೆ.
ಎಂ. ಸುಧೀರ್ ರಾವ್
ಟೆಲಿಕಾಮ್ ಪ್ರೊಫೆಶನಲ್