ಹಳ್ಳಿಗೆ ನಡೆಯಿರಿ ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣ

r-ashok
Published on

ಜನರ ಬಳಿಗೆ ಆಡಳಿತ ತೆಗೆದುಕೊಂಡು ಹೋಗಲು ಕ್ರಮ * ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ

ಬೆಂಗಳೂರು: ಗ್ರಾಮೀಣ ಭಾಗದ ಜನರು ಸಣ್ಣ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಹಳ್ಳಿಗೆ ನಡೆಯಿರಿ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಬಳಿಗೆ ಆಡಳಿತ ತೆಗೆದುಕೊಂಡು ಹೋಗಿ ಸ್ಥಳೀಯಮಟ್ಟದ ಕುಂದು-ಕೊರತೆಗಳು ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಲು ಕ್ರಮವಹಿಸಲಾಗುವುದು. ಜಿಲ್ಲಾಧಿಕಾರಿಯಿಂದ ಹಿಡಿದು ತಹಸೀಲ್ದಾರ್ ತನಕ ಎಲ್ಲ ಅಧಿಕಾರಿಗಳು ತಿಂಗಳಲ್ಲಿ 1 ದಿನ ಹಳ್ಳಿಗೆ ಹೋಗಿ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯಾದ್ಯಂತ ಏಕಕಾಲಕ್ಕೆ ಈ ಕಾಯಕ್ರಮ ನಡೆಯಲಿದ್ದು, ತಾವೂ ಹಳ್ಳಿಯಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದರು.

ಅಧಿಕಾರಿಗಳು ತಂಗಿದ ಗ್ರಾಮದ ಅಂಗನವಾಡಿ ಕೇಂದ್ರ ಅಥವಾ ಶಾಲೆಯಲ್ಲಿ ಬಿಸಿಯೂಟ ಸೇವಿಸುವ ಮೂಲಕ ಗುಣಮಟ್ಟ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಜನಸ್ನೇಹಿ ಆಡಳಿತದ ಮತ್ತೊಂದು ಹೆಜ್ಜೆ ಇದಾಗಿದ್ದು, ಆಡಳಿತ ಯಂತ್ರವೂ ಚುರುಕಾಗಲಿದೆ ಎಂದು ಅಶೋಕ್ ವಿವರಿಸಿದರು.

ಪ್ರಾಯೋಗಿಕ ಜಾರಿ: ಎಲ್ಲ ರೀತಿಯ ಮಾಸಾಶನಗಳನ್ನು ಅರ್ಹ ಬಡವರು ಅರ್ಜಿ ಹಾಕಿಕೊಳ್ಳದೆ ಪಡೆಯುವ ಪಾರದರ್ಶಕ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಬಳ್ಳಾರಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಉಭಯ ಜಿಲ್ಲೆಗಳ ತಲಾ 8 ಸಾವಿರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಮಾಸಾಶನ ಜಮೆಯಾಗಿದೆ. ರಾಜ್ಯವ್ಯಾಪಿ ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಶೇ.96 ಪೂರ್ಣಗೊಂಡಿದ್ದು, ಬಾಕಿ ಶೇ.4 ಪರಿಶೀಲನೆಯಲ್ಲಿದೆ ಎಂದರು.

ಅಂಚೆ ಕಚೇರಿಗಳ ಬದಲು ಬ್ಯಾಂಕ್ ಖಾತೆಗೆ ಜಮೆ ವ್ಯವಸ್ಥೆಯಾಗಲಿದೆ. ಆಧಾರ್ ಸಂಖ್ಯೆ ಜೋಡಿಸಿದ ಅರ್ಹರಿಗೆ ಮಾಸಾಶನ ಮಂಜೂರು ಪತ್ರ ರವಾನೆಯಾಗಲಿದೆ. ಸಂಬಂಧಿಸಿದ ಕಚೇರಿಗೆ ಫಲಾನುಭವಿ ತೆರಳಿ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟರೆ ಸಾಕು, ಖಾತೆಗೆ ಹಣ ಜಮೆಯಾಗಲಿದೆ. ಈ ಕ್ರಮದಿಂದ ಸೋರಿಕೆ, ಮಧ್ಯವರ್ತಿಗಳ ಹಾವಳಿ, ವಿಳಂಬ ತಪ್ಪಿ ಅರ್ಹರು ಸಕಾಲಕ್ಕೆ ಮಾಸಾಶನ ಪಡೆಯಲು ಅನುಕೂಲವಾಗಲಿದೆ ಎಂದು ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net