

ಆನೇಕಲ್: ಗ್ರಾಮೀಣ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು,ಬಜೆಟ್‌ನಲ್ಲಿ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸರ್ಜಾಪುರದಲ್ಲಿ ಮಂಗಳವಾರ 15 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ನಾಗರಕಟ್ಟೆ ಬಳಿ ಆಯೋಜಿಸಿದ್ದ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸಬ್ ಅರ್ಬನ್ ರೈಲಿಗೆ ಆದ್ಯತೆ ನೀಡಲಾಗಿದೆ. ಆನೇಕಲ್ ತಾಲೂಕಿನ ಬೊಮ್ಮಸಂದ್ರದವರೆಗೆ ಸಬ್ ಅರ್ಬನ್ ರೈಲು ಸಂಚರಿಸಲಿದೆ. ಇದು ಹುಸ್ಕೂರು, ಸಿಂಗೇನಾ ಅಗ್ರಹಾರ, ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರು ನಗರ ಸುತ್ತಮುತ್ತಲಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ರಿಂಗ್ ರೋಡ್ ಯೋಜನೆ ಪ್ರಗತಿಯಲ್ಲಿದೆ ಎಂದರು.
ಎಲ್ಲರಿಗೂ ವಸತಿ ಕಲ್ಪಿಸಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆರ್ಥಿಕ ವರ್ಷದಲ್ಲಿ 1.50 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಸುಮಾರು 80,000 ಮನೆಗಳನ್ನು ಫಲಾನುಭವಿಗಳಿಗೆ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಗೃಹ ಮಂಡಳಿಯಿಂದ 21,000 ನಿವೇಶನ ಅಭಿವೃದ್ಧಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 83,189 ಮನೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಬಡವರು, ಹೆಣ್ಣುಮಕ್ಕಳು ಹಾಗೂ ಶೋಷಿತ ವರ್ಗದವರ ಏಳಿಗೆಗಾಗಿ ಭಾಗ್ಯಲಕ್ಷ್ಮೀ ಯೋಜನೆ ಘೋಷಿಸಿದ್ದು, ಸಿಎಂ ಕಿಸಾನ್ ಯೋಜನೆ ಜಾರಿಗೊಳಿಸಿ ವಾರ್ಷಿಕ 4000 ನೆರವು ಪೋಷಿಸುವ ಜತೆಗೆ 41 ಲಕ್ಷ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ವೃದ್ಧಾಪ್ಯ ವೇತನಕ್ಕಾಗಿ ಕಚೇರಿಗೆ ಅಲೆಯುವ ಸ್ಥಿತಿ ಬದಲಾಗಲಿದೆ. ಕಂದಾಯ ಇಲಾಖೆ ನೇತೃತ್ವದಲ್ಲಿ ಬಡವರ, ರೈತರ ಸೇವೆಗೆ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ರಾಜ್ಯದ ಪ್ರವಾಹ ಪೀಡಿತರಿಗೆ ಧ್ವನಿಯಾಗಿ ನಿಲ್ಲಬೇಕು. ಅವರಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕಿದೆ. ನೊಂದವರಿಗೆ ಹಾಗೂ ಬಡವರಿಗೆ ಈ ಬಾರಿಯ ಬಜೆಟ್ ಸಹಕಾರಿಯಾಗಲಿದೆ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಮೆಟ್ರೋ ವಿಸ್ತರಿಬೇಕು. ಆನೇಕಲ್ ತಾಲೂಕು ಗಡಿ ಭಾಗವಾಗಿದ್ದು, ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಆನೇಕಲ್ ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ಅಂಬೇಡ್ಕರ್ ಭವನಕ್ಕೆ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಕಾವೇರಿ ಕುಡಿಯುವ ನೀರು ಆನೇಕಲ್ ಪಟ್ಟಣಕ್ಕೆ ಬಂದಿದೆ. ಇದನ್ನು ಇಡೀ ತಾಲೂಕಿಗೆ ನೀಡಲು ಅನುದಾನ ಕಲ್ಪಿಸಿಕೊಡಬೇಕು ಎಂದರು.
ನಗರ ಜಿಪಂ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ಸಚಿವ ಆರ್.ಅಶೋಕ್ ಅವರು ಉತ್ತಮ ಹುದ್ದೆ ನೀಡುವ ಭರವಸೆ ನೀಡಿದ್ದಾರೆ. ನಾಲ್ಕು ವರ್ಷ ಬೆಂಗಳೂರು ನಗರ ಜಿಪಂ ಅಧ್ಯಕ್ಷನಾಗಿ ಹಲವು ಜನಪರ ಕೆಲಸ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಯಾವುದೇ ಜವಾಬ್ದಾರಿ ನೀಡಿದರೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಶಾಸಕರಾದ ಸತೀಶರೆಡ್ಡಿ, ಎಂ.ಕೃಷ್ಣಪ್ಪ, ಎಸ್.ಆರ್ ವಿಶ್ವನಾಥ್, ಎಸ್.ಟಿ.ಸೋಮಶೇಖರ್, ವಿಧಾನಪರಿಷತ್ ಸದಸ್ಯ ಮನೋಹರ್, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ರಾಘವೇಂದ್ರ, ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಜಿಪಂ ಸದಸ್ಯರಾದ ಮರಿಸ್ವಾಮಿ, ಗಣೇಶ್, ಬಂಡಾಪುರ ರಾಮಚಂದ್ರ, ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಬಳ್ಳೂರು ವಸಂತ್, ತಾಪಂ ಮಾಜಿ ಅಧ್ಯಕ್ಷ ವಿ.ಮುರಳಿ ಕೃಷ್ಣ, ಬಿಜೆಪಿ ತಾಲೂಕು ಮಾಜಿ ಉಪಾಧ್ಯಕ್ಷ ಕೆ.ವಿ ಶಿವಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಂಕರ್, ಮುಖಂಡರಾದ ಅರವಿಂದ, ಎಸ್.ಆರ್.ಟಿ.ಅಶೋಕ್ ಮತ್ತು ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.
ಯಡಿಯೂರಪ್ಪ ಎಂದರೆ ರೈತರಿಗೆ ಏನಾದರೂ ಗಿಫ್ಟ್ ಕೊಡುವ ವ್ಯಕ್ತಿ ಎಂದರ್ಥ. ಅದೇ ರೀತಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಡವರು, ರೈತರ ಪರವಾದ ಯೋಜನೆ ಜಾರಿಗೆ ತರಲಿದ್ದಾರೆ. ಆರ್.ಅಶೋಕ್, ಸಚಿವ
ಅಧಿಕಾರಿಗಳ ಚಪ್ಪಲಿ ಸವೆಯಲಿ: ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಹಳ್ಳಿಗೆ ಹೋಗಬೇಕು. ಬಡವರು ಕಚೇರಿಗೆ ಅಲೆದು ಚಪ್ಪಲಿ ಸವೆಸಿರುವುದು ಸಾಕು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರರ ಚಪ್ಪಲಿ ಕೂಡ ಸವೆಯಬೇಕು. ದಾಖಲೆಗಳನ್ನು ಕೇಳದೆ ಕೇವಲ ಆಧಾರ್ ಕಾರ್ಡ್ ಮೂಲಕ ವೃದ್ಧಾಪ್ಯ ವೇತನ ನೀಡಬೇಕು. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಜನ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ. ಈ ಪರಿಸ್ಥಿತಿ ಬದಲಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ಜಿಪಂ ಅಧ್ಯಕ್ಷರಿಗೆ ಮಹತ್ವದ ಸ್ಥಾನ: ಬೆಂಗಳೂರು ನಗರ ಜಿಪಂ ಅಧ್ಯಕ್ಷ ಸಿ.ಮುನಿರಾಜು ನಾಲ್ಕು ವರ್ಷ ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಮುಂದಿನ ವಾರ ರಾಜೀನಾಮೆ ನೀಡಲು ಹೇಳಿದ್ದು, ಮಹತ್ವದ ಅಧಿಕಾರ ನೀಡಲು ಮುಂದಾಗಿದ್ದೇವೆ. ಜಿಪಂ ಸದಸ್ಯ ಮರಿಸ್ವಾಮಿ ಜಿಪಂ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದರು.
ಯಡಿಯೂರಪ್ಪ ರಾಜಾಹುಲಿ: ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಿ ಎಲ್ಲರಿಗೂ ಸೂಕ್ತ ಅಧಿಕಾರ ನೀಡಲಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಸರ್ಕಾರ ಮೂರು ವರ್ಷ ಒಳ್ಳೆಯ ಕೆಲಸ ಮಾಡಬೇಕು. ನಮ್ಮ ಮುಖ್ಯಮಂತ್ರಿಗಳು ರಾಜಾಹುಲಿ ಇದ್ದಾರೆ. ಅವರಿಗೆ ಎಲ್ಲವೂ ಗೊತ್ತಿದೆ, ನಾಲ್ಕು ಬಾರಿ ರಾಜ್ಯ ನಿಭಾಯಿಸಿರುವ ಅವರಿಗೆ ಯಾವ ರೀತಿ ಅಧಿಕಾರ ನೀಡಬೇಕು, ಹೇಗೆ ನಿಭಾಯಿಸಬೇಕು ಎನ್ನುವ ಶಕ್ತಿ ಧೈರ್ಯ ಇದೆ ಎಂದು ಬಿಎಸ್‌ವೈ ಕುರಿತು ಸಚಿವ ಅಶೋಕ್ ಬಣ್ಣಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಜನವಿರೋಧಿ ಸರ್ಕಾರ ಆಡಳಿತದಲ್ಲಿತ್ತು. ನಮ್ಮ ಸರ್ಕಾರ ಬರಲು ಹಲವರು ತ್ಯಾಗ ಮಾಡಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡುತ್ತೇವೆ. ನಂತರ ಉಳಿದವರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಅಭಿವೃದ್ಧಿ ಕೆಲಸಕ್ಕೆ ಚಾಲನೆ: 5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕತಿರುಪತಿ ಬಾಗಲೂರು ಮುಖ್ಯರಸ್ತೆ ಕಾಮಗಾರಿ, 1 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ನೀರಿನ ಟ್ಯಾಂಕ್‌ಗಳು, ಕಾಂಕ್ರಿಟ್ ರಸ್ತೆ, ಬೀದಿದೀಪ, ಜನೌಷಧ ಕೇಂದ್ರ, ಆಟದ ಮೈದಾನ, ಶಾಲಾ ಕಟ್ಟಡ, ಆಸ್ಪತ್ರೆ ಕಟ್ಟಡ, ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ, ಇತಿಹಾಸ ಪ್ರಸಿದ್ಧ ಸರ್ಜಾಪುರ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ನಾಗರಬಾವಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.