ಹಾಲೆರೆದು ಭಕ್ತಿ ಸಮರ್ಪಣೆ

21 chandrgutti 1
ಚಂದ್ರಗುತ್ತಿ ಗ್ರಾಮದ ನಾಗರ ಕಟ್ಟೆಗೆ ಭಕ್ತರು ಹಾಲೆರೆದು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
Published on

ಚಂದ್ರಗುತ್ತಿ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾರಗ ಪಂಚಮಿ ಹಬ್ಬವನ್ನು ಜನತೆ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಹಿಳೆಯರು ಬೆಳಗಿನಜಾವದಿಂದಲೇ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡಿದ್ದರು. ಕೆಲವರು ಸಮೀಪದ ನಾಗರಕಟ್ಟೆಗೆ ತೆರಳಿ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಶ್ರೀ ರೇಣುಕಾಂಬಾ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆಗೆ ಭಕ್ತರು ಹಾಲು ನೈವೇದ್ಯ ಅರ್ಪಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಾಗಿ ನಾಗರ ಪಂಚಮಿ ಹಬ್ಬವಿದೆ. ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲ್ಪಡುವ ಈ ಹಬ್ಬವು ಮುಂದಿನ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಇತ್ಯಾದಿ ಹಲವು ಹಬ್ಬದ ಶುಭ ಆಚರಣೆಗಳಿಗೆ ಮುನ್ನುಡಿಯಾಗಿದೆ.
ಚಂದ್ರಗುತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ಹಬ್ಬದಂದು ಜನತೆ ಸಮೀಪದ ನಾಗರಕಟ್ಟೆಗೆ ಭೇಟಿ ನೀಡಿ ಹಾಲು ನೈವೇದ್ಯ ಅರ್ಪಿಸುವ ಮೂಲಕ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ನಾಗರ ಪಂಚಮಿಯಂದು ಗ್ರಾಮದ ಮನೆ ಮನೆಗಳ ಬಾಗಿಲಲ್ಲಿ ಮಾವಿನ ಎಲೆ ತೋರಣ, ಮನೆ ಅಂಗಳದ ಮುಂದೆ ಬಳಿದ ಬಣ್ಣ ಬಣ್ಣದ ರಂಗೋಲಿ ನೋಡುಗರನ್ನು ಆಕರ್ಷಿಸುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net