ಶತಮಾನದ ಶಾಲೆಗೆ ಹೊಸ ಕೊಠಡಿಗಳ ಭಾಗ್ಯ

mkg
Published on

ಜಗಳೂರು: ಶಿಥಿಲಗೊಂಡ ಹಾಲೇಕಲ್ಲು ಗ್ರಾಮದ ಶತಮಾನದ ಸರ್ಕಾರಿ ಶಾಲೆಗೆ ನಾಲ್ಕೈದು ತಿಂಗಳೊಳಗೆ ಹೊಸ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.
ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಶನಿವಾರ ಸರ್ಕಾರಿ ಶಾಲೆಯ ದುಸ್ಥಿತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
1885ರಲ್ಲಿ ನಿರ್ಮಾಣಗೊಂಡ ಹಾಲೇಕಲ್ಲು ಗ್ರಾಮದ ಸರ್ಕಾರಿ ಶಾಲೆ ಬ್ರಿಟಿಷರ ಕಾಲದ್ದಾಗಿದೆ. ಶಾಲಾ ಕೊಠಡಿಗಳು ತುಂಬ ಶಿಥಿಲಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಕಿಟಕಿ, ಬಾಗಿಲು ಹಾಳಾಗಿವೆ. ಆದರೆ, ಅಧಿಕಾರಿಗಳು ಇಂತಹ ಶಾಲೆ ಅಭಿವೃದ್ಧಿಗೆ ಒತ್ತು ನೀಡದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ತಾಲೂಕಿನಲ್ಲಿ ಶತಮಾನ ಪೂರೈಸಿದ ಸರ್ಕಾರಿ ಶಾಲೆಗಳು ಹಾಗೂ ಶಿಥಿಲಗೊಂಡ ಶಾಲೆಗಳ ಸಂಪೂರ್ಣ ಮಾಹಿತಿ ಪಡೆದು ತೀರಾ ಸಮಸ್ಯೆ ಇರುವ ಶಾಲೆಗಳಿಗೆ ಹೊಸ ಕಟ್ಟಡ ನಿರ್ಮಿಸಲು ಶಿಕ್ಷಣ ಸಚಿವರೊಂದಿಗೆ ಮಾತನಾಡುವೆ ಎಂದು ಭರವಸೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಶಪ್ಪ ಮಾತನಾಡಿ, ಜಗಳೂರು ತಾಲೂಕಿನಲ್ಲಿ ನೂರಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಳೆಗಾಲದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡಲು ಶಿಕ್ಷಕರು ಭಯ ಪಡುತ್ತಾರೆ. ಸರ್ಕಾರ ಶಾಲೆಗಳ ಅಭಿವೃದ್ಧ್ದಿಗೆ ಒತ್ತು ನೀಡಬೇಕು ಎಂದರು.
ಹಾಲೆಕಲ್ಲು ಸರ್ಕಾರಿ ಶಾಲೆ ದುಸ್ಥಿತಿ ಬಗ್ಗೆ ಗಮನಕ್ಕೆ ತಂದಿದ್ದರು. ಆದರೆ, ಅನುದಾನದ ಕೊರತೆಯಿಂದ ಏನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗಿನ ಶಾಸಕರ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಹಸೀಲ್ದಾರ್ ಸಂತೋಷ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಮಹೇಶ್ವರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ. ಹಾಲಪ್ಪ, ಪ್ರಭಾರ ಬಿಇಒ ಸುರೇಶ್, ಗ್ರಾಪಂ ಅಧ್ಯಕ್ಷ ಎ.ಕೆ. ಬಸವರಾಜ, ಮುಖ್ಯ ಶಿಕ್ಷಕಿ ಶಿವಕ್ಕ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಬಿ. ರೇವಣಸಿದ್ದಪ್ಪ, ನಿವೃತ್ತ ಶಿಕ್ಷಕ ಕೆ.ಜಿ. ರೇವಣಸಿದ್ದಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ, ಮಹಮದ್ ಗೌಸ್, ಸಿಆರ್‌ಪಿ ವೆಂಕಟಬ್ರಹ್ಮಚಾರಿ, ಪರಶುರಾಮ, ದ್ಯಾಮಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net