ಸಂಪತ್ತು ಗಳಿಸುವ ಜತೆ ಸಮಾಜ ಉಪಯೋಗಿ ಕಾರ್ಯ ಮಾಡಿ- ಇನ್ಫೋಸಿಸ್ ಉಪಾಧ್ಯಕ್ಷ  ವಿನಾಯಕ ಹೆಗಡೆ

Vdit program
Published on

ಹಳಿಯಾಳ: ಯುವ ಸಮೂಹ  ಔದ್ಯೋಗಿಕ ಜೀವನದಲ್ಲಿ ಸಂಪತ್ತನ್ನು ಗಳಿಸುವುದರೊಂದಿಗೆ ಸಮಾಜ ಉಪಯೋಗಿ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವಂತೆ ಇನ್ಫೋಸಿಸ್  ಉಪಾಧ್ಯಕ್ಷ  ವಿನಾಯಕ ಹೆಗಡೆ ವಿದ್ಯಾರ್ಥಿಗಳಿಗೆ  ಕರೆ ನೀಡಿದರು.

ಪಟ್ಟಣದ ಕೆ ಎಲ್ ಎಸ್ ವಿ ಡಿ ಐ ಟಿ  ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ  ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರ ಬಯಸುವ ಕೌಶಲ್ಯವನ್ನು ಹೊಂದಿದಲ್ಲಿ ಅಪಾರ ಉದ್ಯೋಗವಕಾಶಗಳಿವೆ. ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಸಮರ್ಪಣಾ ಭಾವದಿಂದ ಯಶಸ್ವಿ ಜೀವನ ಹೊಂದಬೇಕೆಂದರು.

ಬೆಂಗಳೂರಿನ ಡೆಸಾಪೆಕ್ಸ್  ಸಂಸ್ಥೆಯ ಮುಖ್ಯಸ್ಥ  ಶ್ರೀನಿಧಿ ಹುನಗುಂದ ಮಾತನಾಡಿ ಸೃಜನಾತ್ಮಕ ಕಲ್ಪನೆಗಳನ್ನು ಸಾಕಾರಗೊಳಿಸಿಕೊಳ್ಳಲು ಔದ್ಯಾಮಿಕ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಗಮನಹರಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೆಎಲ್ಎಸ್ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಸಾವ್ಕಾರ್ ಕಳೆದ 20 ವರ್ಷಗಳಿಂದ ವಿ ಡಿ ಐ ಟಿ ಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ಆನ್ ಸೈನ್ಸ್ ಟೆಕ್ನಾಲಜಿಯ 20 ಲಕ್ಷ ರೂಪಾಯಿ ಅನುದಾನದಲ್ಲಿ ತಯಾರಿಸಲಾದ ವೈಬ್ರೇಶನ್ ಪ್ರಯೋಗಾಲಯವನ್ನು ಹಾಗೂ ವಿದ್ಯಾರ್ಥಿ ಗಳಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಅರಿವನ್ನು ಉತ್ತೇಜಿಸುವ ಉದ್ದೇಶದ ಸ್ಪಿಕ್ ಮೇಕೆ ಸಾಂಸ್ಕೃತಿಕ ಘಟಕ ಉದ್ಘಾಟಿಸಲಾಯಿತು.

ಕೆ ಎಲ್ ಎಸ್ ಉಪಾಧ್ಯಕ್ಷರಾದ ಆರ್. ಬಿ.ಭಂಡಾರೆ, ಡಿ. ವಿ. ಕುಲಕರ್ಣಿ, ಕಾರ್ಯದರ್ಶಿ ಎಸ್. ವಿ. ಗಣಾಚಾರಿ ಇದ್ದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ್ ಸಭೀಕರನ್ನು ಸ್ವಾಗತಿಸಿದರು. ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ವಂದಿಸಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ, ಸಂಶೋಧನೆ ಮತ್ತು ಕ್ರೀಡಾ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರುಗಳಿಗೆ ಪುರಾಸ್ಕರಿಸಲಾಯಿತು.  

ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ  ಕೀರ್ತಿ ಶೇಟ್ ಅತ್ತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ಪಡೆದರು. ಡಾ. ಮಹೇಂದ್ರ ದೀಕ್ಷಿತ್, ಡಾ. ವೆಂಕಟೇಶ್, ಪ್ರೊ ಲಕ್ಷ್ಮೀ ಹಟ್ಟಿಹೋಳಿ, ಡಾ. ಸ್ನೇಹಾ ಕುಲಕರ್ಣಿ, ಪ್ರೊ. ಶ್ರೀಗೌರಿ, ಡಾ. ಮುರಗಯ್ಯ, ಪ್ರೊ ಬಿ ಬಿ ಪಾಟೀಲ್ ಮತ್ತು ಡಾ. ವಿನೋದ್ ನಾಯ್ಕ್ ಕಾರ್ಯಕ್ರಮ ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net