

ಕಾರವಾರ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಳಿಯಾಳದ ಕಬ್ಬು ಬೆಳೆಗಾರರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಪಟ್ಟಣದ ಮರಾಠಾ ಸಭಾಭವನದಲ್ಲಿ ಶುಕ್ರವಾರ ಸಭೆ ನಡೆಸಿದ ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿಯ ಸದಸ್ಯರು, ನಂತರ ಘೋಷಣೆ ಕೂಗುತ್ತ ಮೆವರಣಿಗೆ ನಡೆಸಿದರು. ಹಳಿಯಾಳ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಬಳಿ ತಮ್ಮ ಅಹವಾಲು ಹೇಳಿಕೊಂಡರು. ಹಳಿಯಾಳ ಮಾತ್ರವಲ್ಲದೇ ಅಳ್ನಾವರ, ಕಲಘಟಗಿ ಹಾಗೂ ಧಾರವಾಡ ತಾಲೂಕುಗಳ ರೈತರೂ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತಹಸೀಲ್ದಾರ್ ಕಚೇರಿಯ ಎದುರು ಕುಳಿತಿದ್ದರು. ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಅಧಿಕಾರಿಗಳ ಜಂಟಿ ಸಭೆ ನಡೆಸುವಂತೆ ಒತ್ತಾಯ ಮಾಡಿದ್ದರು.
ಶಾಸಕ ಆರ್.ವಿ.ದೇಶಪಾಂಡೆ ಅವರು ಆಗಸ್ಟ್ 30 ರಂದು ಹಳಿಯಾಳದ ಇಐಡಿ ಪ್ಯಾರಿ ಕಾರ್ಖಾನೆ ಅಧಿಕಾರಿಗಳು, ತಾಲೂಕು ಆಡಳಿತ ಹಾಗೂ ಕಬ್ಬು ಬೆಳೆಗಾರರ ಜಂಟಿ ಸಭೆ ನಡೆಸಿದ್ದರು. ಕಬ್ಬು ಬೆಳೆಗಾರರ ಬೇಡಿಕೆಗಳನ್ನು 7 ದಿನಗಳ ಒಳಗೆ ಈಡೇರಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಆದರೆ, ಗಡುವು ಮುಗಿದರೂ ಬೇಡಿಕೆ ಈಡೇರಿಲ್ಲ . ಶಾಸಕರ ಆದೇಶಕ್ಕೂ ಕಂಪನಿ ಬೆಲೆ ಕೊಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಹಿಂದೆ ಕಾರ್ಖಾನೆ ರೈತರಿಂದ ಹೆಚ್ಚುವರಿ ಕಟಾವು ಮತ್ತು ಸಾಗಣೆ ವೆಚ್ಚ (ಎಚ್ ಆ್ಯಂಡ್ ಟಿ) ಆಕರಿಸಿದ್ದು, ಅದರನ್ನು ರೈತರಿಗೆ ಮರುಪಾವತಿ ಮಾಡುವಂತೆ ಸಕ್ಕರೆ ಆಯುಕ್ತರು ಆದೇಶ ಮಾಡಿದ್ದರು. ಪ್ರತಿ ಟನ್‌ಗೆ 256 ರೂ.ಗಳನ್ನು ರೈತರಿಗೆ ಮರುಪಾವತಿ ಮಾಡುವಂತೆ ಆದೇಶವಾಗಿತ್ತು. ಅದನ್ನು ಈಡೇಡಿಸಬೇಕು. ಜಿಟಲ್ ತೂಕದ ಯಂತ್ರವನ್ನು ಕಾರ್ಖಾನೆಯ ಹೊರದ್ವಾರದಲ್ಲಿಯೇ ಸ್ಥಾಪಿಸಲು ಈ ಹಿಂದೆ ಜಿಲ್ಲಾಽಕಾರಿ ಆದೇಶ ಮಾಡಿದ್ದರು. ನಂತರ ಜಂಟಿ ಸ್ಥಳ ಪರಿಶೀಲನೆ ಕೂಡ ನಡೆದಿತ್ತು. ಶಾಸಕರೂ ಈ ಬಗ್ಗೆ ಸೂಚನೆ ನೀಡಿದ್ದರು. ಅದನ್ನೂ ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ರೈತರುಗಳು ಹಳಿಯಾಳ ತಾಲೂಕು, ಅಳ್ನಾವರ ತಾಲೂಕು, ಕಲಘಟಗಿ ತಾಲೂಕು, ಧಾರವಾಡ ತಾಲೂಕು, ದಾಂಡೇಲಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೋಬಾಟಿ, ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಬೆಳಗಾಂವಕರ, ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ರೈತ ಮುಖಂಡರಾದ ಎಂ. ವಿ. ಘಾಡಿ, ಭರತೇಶ ಪಾಟೀಲ್, ಪ್ರಕಾಶ ಪಾಕರಿ, ಮಂಜುಳಾ ಗೌಡಾ, ಅಶೋಕ ಮೇಟಿ, ಪರಶುರಾಮ ಎತ್ತಿನಗುಡ್ಡ, ಉಳವಪ್ಪ,ವಸಂತ ಧಾಕಪ್ಪನವರ, ರಾಮದಾಸ ಬೆಳಗಾಂವಕರ ಇದ್ದರು.