

ಹುಬ್ಬಳ್ಳಿ : ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖದ ಮೂಲ ಧರ್ವಚರಣೆಯಲ್ಲಿದೆ. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ತಾಲೂಕಿನ ಹಳ್ಳಿಯಾಳ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಶ್ರೀ ಸೋಮೇಶ್ವರ ಮಹಾಲಿಂಗ ಹಾಗೂ ಶ್ರೀ ವೀರಭದ್ರೇಶ್ವರ ಮಂಗಲ ಮೂರ್ತಿ ಪ್ರತಿಷ್ಠಾಪಿಸಿ ನಂತರ ಜರುಗಿದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ದುಷ್ಟ ಪ್ರವೃತ್ತಿ ನಾಶಗೊಳಿಸಿ ಸಾತ್ವಿಕ ಶಕ್ತಿ ಬೆಳೆಸಲು ನಿಜವಾದ ಅರಿವು ಮತ್ತು ಧರ್ಮ ಪರಿಪಾಲನೆ ಅಗತ್ಯ. ದಕ್ಷನ ದುರಹಂಕಾರ ಮಿತಿ ಮೀರಿದಾಗ ಶಿವನಿಗೆ ಅಪಮಾನ ಮಾಡಿದ ಸಂದರ್ಭದಲ್ಲಿ ಪರಶಿವನ ಜಟಾಮುಕುಟದಿಂದ ಶ್ರೀ ವೀರಭದ್ರಸ್ವಾಮಿ ಅವತರಿಸಿ, ದಕ್ಷನ ದುರಹಂಕಾರ ನಾಶ ಮಾಡುತ್ತಾನೆ. ವ್ಯಕ್ತಿ ಶಕುನಿಯಾದರೆ ಧರ್ಮ ಮತ್ತು ಸಮಾಜ ಛಿದ್ರಗೊಳ್ಳುತ್ತದೆ. ವ್ಯಕ್ತಿ ವೀರಭದ್ರನಾಗಿ ಬಾಳಿದರೆ ಧರ್ಮ ಸಂಸ್ಕೃತಿ ಪುನರುತ್ಥಾನಗೊಳ್ಳಲು ಸಾಧ್ಯ ಎಂದು ಹೇಳಿದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಕಲ್ಲೂರ ವೀರಯ್ಯ, ಹೆಗ್ಗಡಹಳ್ಳಿಮಠದ ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಂಡು, ನುಡಿ ನಮನ ಸಲ್ಲಿಸಿದರು.
ಗ್ರಾಮದ ಹಿರಿಯರಾದ ಬಿ.ಡಿ. ನಾಗನಗೌಡ, ಗುರುನಾಥಗೌಡ ಮಾದಾಪುರ, ಗುರುಪಾದಪ್ಪ ಬೆಳವಟಗಿ, ಟಾಕನಗೌಡ ಗಬ್ಬೂರು, ಉಮೇಶಗೌಡ ಪಾಟೀಲ, ಉಮೇಶ ಹೊಸಮನಿ, ಗ್ರಾಪಂ ಅಧ್ಯಕ್ಷ ನಲವಡಿ, ಗ್ರಾಮಾಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.