

ಹಳಿಯಾಳ: ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ತಾಲೂಕಿನ ಹುಣಸವಾಡದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್ ಜಿ.ಕೆ. ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಯುವ ಪೀಳಿಗೆ ಮದ್ಯದ ದಾಸರಾಗುತ್ತಿದ್ದಾರೆ. ಮಹಿಳೆಯರು ದುಡಿದ ದುಡ್ಡನ್ನು ಒತ್ತಾಯಪೂರ್ವಕವಾಗಿ ಪಡೆದು ಕುಡಿತಕ್ಕೆ ಬಳಸುತ್ತಿದ್ದಾರೆ. ಇದರಿಂದಾಗಿ ಗ್ರಾಮದ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಇನ್ನು ಗ್ರಾಮದ ಶಾಲಾ ಆವರಣದಲ್ಲಿ ರಾತ್ರಿ ವೇಳೆ ಕೆಲವರು ಮದ್ಯ ಸೇವಿಸಿ ಶಾಲೆಯ ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ಗ್ರಾಮದ ಕೆಲವರು ಹಳಿಯಾಳದಿಂದ ಮದ್ಯ ಖರೀದಿಸಿ ಇಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ಬಂದ್ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಬಳಿಕ ಗ್ರಾಮಸ್ಥರು ಮನವಿ ಪ್ರತಿಯನ್ನು ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮಣ ರೇಡಕರ, ಏಕನಾಥ ಮಿರಾಶಿ, ಶಂಕರ ರೇಡೇಕರ, ಹರಿಶ್ಚಂದ್ರ ಚಿಬ್ಬುಲ್ಕರ, ಮಂಜುನಾಥ ಕದಂ, ರಾಜು ಮುನವಳ್ಳಿ, ಪರುಶರಾಮ ಘಾಟಗೆ, ಮಾವಳು ರೇಡೆಕರ, ಮಂಜುನಾಥ ರೇಡೆಕರ, ಪ್ರೀತಿ ಲಕ್ಷ್ಮಣ ರೇಡೆಕರ, ಅಶ್ವಿನಿ ಮೇಘರಾಜ ಘಾಟಗೆ ಇದ್ದರು.